G. Parameshwara : ದರೋಡೆ, ಕಳ್ಳತನ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಪೊಲೀಸರನ್ನು ಅಮಾನತು ಮಾತ್ರವಲ್ಲ, ಕೆಲಸದಿಂದಲೇ ವಜಾ ಮಾಡುವ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

G Parameshwara – ವಿಧಾನ ಪರಿಷತ್ನಲ್ಲಿ ಜೆಡಿಎಸ್ ಪ್ರಶ್ನೆ; ಪೊಲೀಸರ ವಿರುದ್ಧ ಗಂಭೀರ ಆರೋಪ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಅವರು ರಾಜ್ಯದಲ್ಲಿ ದರೋಡೆ, ಮನೆಗಳ್ಳತನ ಹಾಗೂ ಹಗಲು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಪ್ರಶ್ನೆ ಎತ್ತಿದರು.
ಕೆಲವು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳೇ ಕಳ್ಳತನ ಮತ್ತು ದರೋಡೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದರು.
“ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ರಕ್ಷಕರೇ ಭಕ್ಷಕರು ಆಗ್ತಿದ್ದಾರೆ. ಇದರಿಂದ ಜನರು ಪೊಲೀಸರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ಶರವಣ ಸರ್ಕಾರದ ಗಮನ ಸೆಳೆದರು.
ಇಂತಹ ಅಕ್ರಮಗಳಲ್ಲಿ ಭಾಗಿಯಾದ ಪೊಲೀಸರನ್ನು ಕೆಲಸದಿಂದ ವಜಾ ಮಾಡಲು ವಿಶೇಷ ಕಾನೂನು ತರಬೇಕು ಎಂದು ಅವರು ಒತ್ತಾಯಿಸಿದರು.
37 ಜಿಲ್ಲೆಗಳಲ್ಲಿ 88 ಪೊಲೀಸರ ವಿರುದ್ಧ ಪ್ರಕರಣ – ಪರಮೇಶ್ವರ್
ಇದಕ್ಕೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯದ 37 ಜಿಲ್ಲೆಗಳಲ್ಲಿ 88 ಪೊಲೀಸರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
“ಇದು ನಮ್ಮ ಸರ್ಕಾರ ಬಂದ ಬಳಿಕ ಮಾತ್ರ ನಡೆದಿರುವುದಲ್ಲ. ಪೊಲೀಸ್ ಇಲಾಖೆಯಲ್ಲಿ ಸುಮಾರು 1.6 ಲಕ್ಷ ಸಿಬ್ಬಂದಿ ಇದ್ದಾರೆ. ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಎಲ್ಲರೂ ಕಳ್ಳರು ಎನ್ನುವುದು ತಪ್ಪು” ಎಂದು ಸ್ಪಷ್ಟಪಡಿಸಿದರು.
ಅಮಾನತು, ಬಂಧನ, FIR; ಕಠಿಣ ಕ್ರಮ ಜಾರಿ
ಅಕ್ರಮಗಳಲ್ಲಿ ಪೊಲೀಸರ ಶಾಮೀಲಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವರು ಹೇಳಿದರು.
“88 ಜನರ ವಿರುದ್ಧ FIR ದಾಖಲಾಗಿದೆ, ಅಮಾನತು ಮಾಡಲಾಗಿದೆ, ಕೆಲವರನ್ನು ಬಂಧನ ಕೂಡ ಮಾಡಲಾಗಿದೆ. ಅನೇಕ ಕಠಿಣ ಕ್ರಮಗಳನ್ನು ನಾವು ಈಗಾಗಲೇ ತೆಗೆದುಕೊಂಡಿದ್ದೇವೆ” ಎಂದು ತಿಳಿಸಿದರು.
‘ಅಮಾನತು ಮಾತ್ರವಲ್ಲ, ಕೆಲಸದಿಂದ ವಜಾ’
ಪೊಲೀಸ್ ಇಲಾಖೆಯ ಉತ್ತಮ ಕಾರ್ಯದ ಫಲವಾಗಿ ರಾಜ್ಯದಲ್ಲಿ ಶಾಂತಿ ಕಾಪಾಡಲಾಗಿದೆ ಎಂದು ಹೇಳಿದ ಸಚಿವ ಪರಮೇಶ್ವರ್,
“ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ.
ಪೊಲೀಸ್ ಇಲಾಖೆ ಒಟ್ಟಾರೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ ಅಕ್ರಮಗಳಲ್ಲಿ ಭಾಗಿಯಾಗುವ ಪೊಲೀಸರನ್ನು ಅಮಾನತು ಮಾತ್ರವಲ್ಲ, ಕೆಲಸದಿಂದಲೇ ವಜಾ ಮಾಡುವ ಕ್ರಮವನ್ನು ಸರ್ಕಾರ ಜಾರಿಗೊಳಿಸುತ್ತಿದೆ” ಎಂದು ಸ್ಪಷ್ಟವಾಗಿ ತಿಳಿಸಿದರು.




