ಬೆಂಗಳೂರಿನಲ್ಲಿ ಫುಟ್ ಪಾತ್ ಮೇಲೆ ವಾಹನ ಓಡಿಸಿದ್ರೆ 5 ಸಾವಿರ ದಂಡ! 2ನೇ ಬಾರಿ ಸಿಕ್ಕಿಬಿದ್ರೆ ₹10 ಸಾವಿರ – ಸರ್ಕಾರಕ್ಕೆ ಪ್ರಸ್ತಾವನೆ

ಫುಟ್ಪಾತ್ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಇನ್ಮುಂದೆ ಭಾರಿ ದಂಡ ವಿಧಿಸುವ ಸಾಧ್ಯತೆ ಇದೆ. ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಫುಟ್ಪಾತ್ ಮೇಲೆ ವಾಹನ ಓಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾಗಿದ್ದು, ದಂಡದ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬೀಳುತ್ತೆ ಐದು ಸಾವಿರ ದಂಡ!
ಸದ್ಯ ಫುಟ್ಪಾತ್ ಮೇಲೆ ವಾಹನ ಚಲಾಯಿಸಿದರೆ ₹500 ದಂಡ ವಿಧಿಸಲಾಗುತ್ತಿದೆ. ಆದರೆ ಸಾರಿಗೆ ಇಲಾಖೆ ಸಲ್ಲಿಸಿರುವ ಹೊಸ ಪ್ರಸ್ತಾವನೆಯಂತೆ, ಇದೇ ನಿಯಮವನ್ನು ಮೊದಲ ಬಾರಿಗೆ ಉಲ್ಲಂಘಿಸಿದರೆ 5 ಸಾವಿರ ದಂಡ ವಿಧಿಸುವಂತೆ ಶಿಫಾರಸು ಮಾಡಲಾಗಿದೆ.
ಇನ್ನು ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದರೆ ₹10,000 ದಂಡ ವಿಧಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಯಾವುದೇ ರೀತಿಯ ವಾಹನವನ್ನು ಫುಟ್ಪಾತ್ ಮೇಲೆ ಚಲಾಯಿಸಿದರೂ ಈ ದಂಡ ಅನ್ವಯಿಸುವ ಸಾಧ್ಯತೆಯಿದೆ.

ಪಾದಚಾರಿಗಳ ಸುರಕ್ಷತೆಗೆ ಕಠಿಣ ಕ್ರಮ
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಫುಟ್ಪಾತ್ಗಳ ಮೇಲೆಯೇ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳು ರಸ್ತೆಗೆ ಇಳಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತದ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಫುಟ್ಪಾತ್ಗಳನ್ನು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಮಾತ್ರ ಬಳಸುವಂತೆ ಮಾಡುವ ಉದ್ದೇಶದಿಂದ ದಂಡದ ಮೊತ್ತ ಹೆಚ್ಚಿಸುವ ಪ್ರಸ್ತಾವನೆ ರೂಪಿಸಲಾಗಿದೆ.
RAED THIS : ಟ್ರಾಫಿಕ್ ಫೈನ್ ರಿಯಾಯಿತಿಗೆ ಗುಡ್ ರೆಸ್ಪಾನ್ಸ್ – 14 ದಿನದಲ್ಲಿ ಅಧಿಕ ದಂಡ ಸಂಗ್ರಹ
ಸದ್ಯಕ್ಕೆ 5 ಸಾವಿರ ದಂಡ ಜಾರಿಯಲ್ಲಿಲ್ಲ
ದಂಡ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ಆಯುಕ್ತರು ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪ್ರಸ್ತಾವನೆಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದ ಬಳಿಕ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸರ್ಕಾರದಿಂದ ಅಂತಿಮ ಆದೇಶ ಹೊರಬಂದ ಬಳಿಕವಷ್ಟೇ ಪರಿಷ್ಕೃತ ದಂಡ ಜಾರಿಗೆ ಬರಲಿದೆ.
ಹೀಗಾಗಿ ಸದ್ಯಕ್ಕೆ ಫುಟ್ಪಾತ್ ಮೇಲೆ ವಾಹನ ಚಲಾಯಿಸಿದರೆ ₹5,000 ಅಥವಾ ₹10,000 ದಂಡ ಜಾರಿಯಾಗಿಲ್ಲ. ಪ್ರಸ್ತುತ ₹500 ದಂಡವೇ ಅನ್ವಯವಾಗುತ್ತಿದೆ.

ಸರ್ಕಾರದ ಅಂತಿಮ ಆದೇಶದ ಬಳಿಕ ಹೊಸ ದಂಡ ಜಾರಿಗೆ ಬಂದರೆ, ಫುಟ್ಪಾತ್ ಮೇಲೆ ವಾಹನ ಓಡಿಸುವ ಸವಾರರಿಗೆ ಭಾರಿ ಹೊಡೆತ ಬೀಳಲಿದೆ.
ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಲಿದೆ.
MUST WATCH : ಖರ್ಗೆ ಕಾರ್ಯಕ್ರಮದ ಸ್ಥಳ ಶುದ್ಧೀಕರಣ – ಹಾಸನದಲ್ಲಿ ಕಾಂಗ್ರೆಸ್ ಪ್ರತಿಭಟನೆ.!




