Davanagere : ಅನುಮಾನಸ್ಪದ ರೀತಿಯಲ್ಲಿ 19ರ ಹರೆಯದ ನವ ವಿವಾಹಿತೆ ಮೃತದೇಹ ಪತ್ತೆ!

ಪ್ರೀತಿಸಿ ಮದುವೆ ಆಗಿದ್ದ ಯುವತಿಯೊಬ್ಬಳು ಹೆಣವಾಗಿ ಮಲಗಿದ್ದು, ಗಂಡನ ಮನೆಯವರೇ ಕೊಂದಿದ್ದಾರೆ ಅಂತಾ ಯುವತಿಯ ಹೆತ್ತವರು ಆರೋಪ ಮಾಡ್ತಿದ್ದಾರೆ. ಅಷ್ಟಕ್ಕೂ ಈ ಘಟನೆ ಬೆಳಕಿಗೆ ಬಂದಿರುವುದು Davanagere ಯಲ್ಲಿ.

ಗಂಡನ ಮನೆಯವರೇ ಕೊಲೆ ಮಾಡಿ, ನೇಣು ಹಾಕಿದ್ರಾ?
ಹೀಗೆ ಜೋಡಿ ಜೀವಗಳಂತೆ ಇರುವ ಪ್ರಣಯ ಪಕ್ಷಿಗಳ ಹೆಸರು ಅಮೂಲ್ಯ ಹಾಗೂ ಧನುಷ್ ಅಂತಾ. ಇವರಿಬ್ಬರು ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ನಿವಾಸಿಗಳು. ಇಬ್ಬರು ಕ್ಲಾಸ್ ಮೇಟ್ ಮೇಲಾಗಿ ಒಂದೇ ಊರು, ನೋಡ ನೋಡುತ್ತಿದ್ದಂತೆ ಇಬ್ಬರ ಮಧ್ಯೆ ಅದ್ಯಾಗೋ ಪ್ರೀತಿ ಚಿಗುರೊಡೆದಿತ್ತು. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡ ಬಂದಿದ್ದು, ಇವರ ಮದುವೆಗೆ ಕುಟುಂಬಸ್ಥರ ವಿರೋಧ ಇತ್ತು. ಆದ್ರು ಕೂಡ ಪೊಲೀಸರ ಭದ್ರತೆಯಲ್ಲಿ ಈ ಜೋಡಿ ಹಕ್ಕಿಗಳು ಕಳೆದ ಒಂದೂವರೆ ವರ್ಷದ ಹಿಂದೆ ಮದುವೆ ಆಗಿದ್ರು. ಮದುವೆ ಮಾಡಿಕೊಂಡ ಪ್ರೇಮಿಗಳು ದಾವಣಗೆರೆಯ ರಾಮನಗರದಲ್ಲಿ ವಾಸವಾಗಿದ್ದರು, ಧನುಷ್ ಹೂವಿನ ಮಂಡಿಯಲ್ಲಿ ಕೂಲಿ ಕೆಲಸ ಮಾಡಿ ಸುಂದರ ಸಂಸಾರ ನಡೆಸುತ್ತಿದ್ದ.
ಆದ್ರೆ ಪ್ರೇಮಿಗಳ ಜೀವನದಲ್ಲಿ ಕಳೆದ ರಾತ್ರಿ ಬಿರುಗಾಳಿ ಎದ್ದಿದೆ. ಅಮೂಲ್ಯ ತಂಗಿದ್ದ ಬಾಡಿಗೆ ಮನೆಯಲ್ಲಿ ಆಕೆಯ ಮೃತದೇಹವು ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪತಿ ಧನುಷ್ ಹಾಗೂ ಆತನ ಕುಟುಂಬಸ್ಥರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದು ಕೇವಲ ಆತ್ಮಹತ್ಯೆಯಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ಕೊಲೆ ಎಂದು ಮೃತಳ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ : ಪಿಜಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ!
ಮಗಳನ್ನು ಕಳೆದುಕೊಂಡು ಮುಗಿಲು ಮುಟ್ಟಿದ ಹೆತ್ತವರ ಆಕ್ರಂಧನ
ಯುವತಿ ಅಮೂಲ್ಯಳ ಅಕಾಲಿಕ ಸಾವಿನ ಸುದ್ದಿ ಕೇಳಿ ಆಕೆಯ ಹೆತ್ತವರಿಗೆ ಬರ ಸಿಡಿಲೇ ಬಡಿದಂತಾಗಿತ್ತು. ದಾವಣಗೆರೆಯ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿದ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಪ್ರೀತಿಯ ಮಗಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು ನೆರೆದಿದ್ದವರ ಕರುಳು ಹಿಂಡುವಂತಿತ್ತು. ಅಮೂಲ್ಯಳನ್ನು ಗಂಡ ಹಾಗೂ ಆತನ ಮನೆಯವರು ಕೊಂದು ಬಳಿಕ ನೇಣು ಹಾಕಿದ್ದಾರೆ. ಆಕೆಯ ಸಾವಿಗೆ ಕಾರಣರಾದ ಪತಿ ಧನುಷ್ ಮತ್ತು ಆತನ ಕುಟುಂಬಸ್ಥರನ್ನು ತಕ್ಷಣವೇ ಬಂಧಿಸಿ, ಅವರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಮೃತಳ ಕುಟುಂಬಸ್ಥರು ಒತ್ತಾಯಿಸಿದ್ರು.

ತನಿಖೆಯಿಂದಷ್ಟೇ ಹೊರಬರಬೇಕಿದೆ ಸತ್ಯ
ಸದ್ಯ ಈ ಸಂಬಂಧ ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅದೇನೆ ಆಗಲಿ ಹೆತ್ತವರ ವಿರೋಧದ ನಡುವೆಯೂ ಸತಿ-ಪತಿಯಾಗಿ ಬಾಳಲು ಬಂದ ನವವಿವಾಹಿತೆಯೊಬ್ಬಳು ಕೇವಲ 19ನೇ ವಯಸ್ಸಿಗೆ ಶವವಾಗಿ ಮಾರ್ಪಟ್ಟಿರುವುದು ದುರಂತವೇ ಸರಿ. ಅಂತರ್ಜಾತಿ ವಿವಾಹದಿಂದಲೇ ಈ ಘಟನೆ ನಡೆದಿದೆಯೇ ಅಥವಾ ಕೌಟುಂಬಿಕ ಕಲಹ ಕಾರಣವೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

ಇದನ್ನು ನೋಡಿ : ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ಕೇಂದ್ರ ಸಚಿವ ಕುಮಾರಸ್ವಾಮಿ ಏನಂದ್ರು




