Bagalakot : ಬಾಗಲಕೋಟೆ ರಬಕವಿಬನಹಟ್ಟಿ ಬಂಡಿಗಣಿ ಮಠದ ದಾಸೋಹ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ (75) ಸಕ್ಕರೆ ಕಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾದರು.

Bagalakot : ರಬಕವಿಬನಹಟ್ಟಿ ನಗರದ ಬಂಡಿಗಣಿ ಮಠದ ದಾಸೋಹ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿರುವ ದುಃಖದ ಸುದ್ದಿ ಭಕ್ತರ ನಡುವೆ ಆಘಾತ ತಂದಿದೆ. ದಾನಧರ್ಮ ಮತ್ತು ದಾಸೋಹ ಸೇವೆಯ ಮೂಲಕ ಹೆಸರುವಾಸಿಯಾಗಿದ್ದ ಸ್ವಾಮೀಜಿಗಳಿಗೆ ಲಕ್ಷಾಂತರ ಭಕ್ತರ ಪ್ರೀತಿ ಮತ್ತು ಭಕ್ತಿ ಇತ್ತು.
75 ವರ್ಷದ ದಾನೇಶ್ವರ ಸ್ವಾಮೀಜಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದೆ, ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಲಿಂಗೈಕ್ಯರಾದರು.
ಸ್ವಾಮೀಜಿಯವರ ನಿಧನದ ಸುದ್ದಿ ಹರಿದಾಡುತ್ತಿದ್ದಂತೆ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದು, ಮಠದ ಆಸಪಾಸಿನಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ ದಾನೇಶ್ವರ ಸ್ವಾಮೀಜಿ ಇತ್ತೀಚೆಗೆ ಬಂಡಿಗಣಿಯಲ್ಲಿ ಸರ್ವಧರ್ಮ ಸಮಾವೇಶವನ್ನೂ ಆಯೋಜಿಸಿದ್ದರು.
ಮೂಲಗಳ ಪ್ರಕಾರ, ನಾಳೆ ಸಂಜೆ 4 ಗಂಟೆಗೆ ಸ್ವಾಮೀಜಿಯವರ ಅಂತ್ಯಸಂಸ್ಕಾರ ನೆರವೇರಿಸಲಾಗುವುದಾಗಿ ತಿಳಿದು ಬಂದಿದೆ.




