
KOLAR : ಕೋಲಾರ ನಗರದ ಎಂ.ಜಿ. ರಸ್ತೆ ಯಲ್ಲಿರುವ ಬ್ರಾಂಡೆಡ್ ಫ್ಯಾಕ್ಟರಿ ಎಂಬ ಬಟ್ಟೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಮಧ್ಯಾಹ್ನ ಸಂಭವಿಸಿದ ಈ ಘಟನೆಯಲ್ಲಿ ಅಂಗಡಿಯೊಳಗಿನ ಅಂದಾಜು ₹20 ರಿಂದ ₹25 ಲಕ್ಷ ಮೌಲ್ಯದ ಬಟ್ಟೆಗಳು ಮತ್ತು ಇತರೆ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಈ ಅಂಗಡಿ ಇಕ್ರಂ ಪಾಷಾ ಎಂಬ ವ್ಯಾಪಾರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಅರ್ಧ ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ತೀವ್ರತೆಯಿಂದ ಪಕ್ಕದ ಕಟ್ಟಡಗಳಿಗೂ ಅಪಾಯ ತಲಪುವ ಸಾಧ್ಯತೆ ಉಂಟಾಗಿದ್ದ ಕಾರಣ ಸ್ಥಳೀಯರಲ್ಲಿ ಆತಂಕವೂ ಮೂಡಿತ್ತು.
ಸದ್ಯ ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




