
BANGALORE: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಿನ್ನೆಲೆಯಲ್ಲಿ, ಐವರು ಅತಿಥಿ ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ.
ಅತಿಥಿ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಹಾಗೂ ಶಿವರಾಮ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇನ್ನು FIR ದಾಖಲಾಗುತ್ತಿದ್ದಂತೆ, ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ದೃಶ್ಯಗಳಲ್ಲಿ, ಅತಿಥಿ ಉಪನ್ಯಾಸಕ ರಾಮಾಂಜನೇಯ ವಿಶ್ವವಿದ್ಯಾಲಯ ಆವರಣದಲ್ಲಿ ಶರ್ಟ್ ಬಿಚ್ಚಿ ಡ್ಯಾನ್ಸ್ ಮಾಡಿರುವುದು. ವಿದ್ಯಾರ್ಥಿಯನ್ನೆ ಎತ್ತಿಕೊಂಡು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ ದೃಶ್ಯ ಹಾಗೂ ಕಾರಿನೊಳಗೆ ಕುಳಿತು ಮದ್ಯ ಸೇವಿಸಿರುವ ವಿಡಿಯೋ ವೈರಲ್ ಆಗಿವೆ.
ಇನ್ನು ಅಷ್ಟೇ ಅಲ್ಲದೆ, ರಾಮಾಂಜನೇಯ ವಿರುದ್ಧ ಅಧಿಕಾರ ದುರ್ಬಳಕೆ ಆರೋಪಗಳು ಕೂಡ ಕೇಳಿಬಂದಿವೆ. ಇಂಟರ್ನಲ್ ಮಾರ್ಕ್ಸ್ ನೀಡಲು ವಿದ್ಯಾರ್ಥಿಗಳಿಂದ ಹಣ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ನೇತ್ರಾನಂದ ಎಂಬ ದೃಷ್ಟಿಹೀನ ವಿದ್ಯಾರ್ಥಿಗೆ ಸಾವಿರಾರು ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪವೂ ಕೇಳಿಬಂದಿದೆ.




