
ಈ ವರ್ಷದ ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21ರಂದು ಸಂಭವಿಸಲಿದ್ದು, ಖಗೋಳ ಪ್ರೇಮಿಗಳಿಗೆ ಮತ್ತೊಂದು ಅಪರೂಪದ ಕ್ಷಣ ಕಾದಿದೆ. ಮಹಾಲಯ ಅಮಾವಾಸ್ಯೆಯ ದಿನ ನಡೆಯಲಿರುವ ಈ ಭಾಗಶಃ ಸೂರ್ಯಗ್ರಹಣವನ್ನು ವಿಶ್ವದ ಹಲವೆಡೆ ಕಣ್ತುಂಬಿಕೊಳ್ಳಬಹುದಾದರೂ, ಭಾರತದಲ್ಲಿ ಮಾತ್ರ ಗೋಚರಿಸುವುದಿಲ್ಲ.
ಸೆಪ್ಟೆಂಬರ್ 7ರಂದು ಚಂದ್ರಗ್ರಹಣ ನಡೆದಿದ್ದು, ಕೇವಲ ಹದಿನೈದು ದಿನಗಳ ಅಂತರದಲ್ಲಿ ಈಗ ಸೂರ್ಯಗ್ರಹಣ ಸಂಭವಿಸುತ್ತಿರುವುದು ಖಗೋಳ ವಿಜ್ಞಾನಿಗಳಿಗೆ ಹೆಚ್ಚಿನ ಕುತೂಹಲದ ಸಂಗತಿ. 2025ರ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣವಾಗಿರುವ ಇದು ಭಾಗಶಃ (ಖಂಡಗ್ರಾಸ) ಗ್ರಹಣವಾಗಿದ್ದು, ಸೂರ್ಯನ ಒಂದು ಭಾಗವನ್ನು ಮಾತ್ರ ಚಂದ್ರ ಆವರಿಸಲಿದೆ.
ಭಾರತೀಯ ಕಾಲಮಾನದ ಪ್ರಕಾರ ಸೆ. 21ರಂದು ರಾತ್ರಿ 11 ಗಂಟೆಯಿಂದ ಮರುದಿನ ಮುಂಜಾನೆ 3.23ರವರೆಗೆ ಈ ಸೂರ್ಯಗ್ರಹಣ ನಡೆಯಲಿದೆ. ಆದರೆ ಈ ಅವಧಿಯಲ್ಲಿ ಭಾರತದಲ್ಲಿ ಸೂರ್ಯ ಅಸ್ತಂಗತರಾಗಿರುವುದರಿಂದ, ದೇಶದ ಜನತೆಗೆ ಈ ಅಪರೂಪದ ಕ್ಷಣ ಗೋಚರಿಸುವುದಿಲ್ಲ.

ನೆಹರು ತಾರಾಲಯ ನಿರ್ದೇಶಕ ಗುರು ಪ್ರಸಾದ್ ಅವರ ಪ್ರಕಾರ, ಈ ಬಾರಿ ಸೂರ್ಯಗ್ರಹಣ ಅಮೆರಿಕಾದ ಸಮೋವಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಕುಕ್ ಐಲ್ಯಾಂಡ್, ಫಿಜಿ, ಫ್ರೆಂಚ್ ಪೋಲಿನೇಷ್ಯಾ, ಪೆಸಿಫಿಕ್ ದ್ವೀಪಗಳು ಹಾಗೂ ಓಷಿಯಾನಿಯಾ ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.
ಧಾರ್ಮಿಕವಾಗಿ ಗ್ರಹಣಕ್ಕೆ ವಿಶಿಷ್ಟ ಮಹತ್ವವಿದ್ದು, ಅನೇಕರು ಗ್ರಹಣದ ಸಮಯದಲ್ಲಿ ನಿಯಮಗಳನ್ನು ಪಾಲಿಸುವುದು ಕಂಡುಬರುತ್ತದೆ. ಕೆಲವು ಜ್ಯೋತಿಷಿಗಳು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವರೆಂದರೆ, ವಿಜ್ಞಾನಿಗಳ ದೃಷ್ಟಿಯಲ್ಲಿ ಇದು ಕೇವಲ ಖಗೋಳೀಯ ಘಟನೆಯಷ್ಟೇ. ಯಾವ ದೃಷ್ಟಿಕೋನದಲ್ಲೇ ನೋಡಿದರೂ, ಈ ವರ್ಷದ ಕೊನೆಯ ಸೂರ್ಯಗ್ರಹಣ ಖಂಡಿತವಾಗಿಯೂ ಗಮನ ಸೆಳೆಯುವ ಘಟನೆ.

