
BANGALORE: ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಕೆಎಂಎಫ್ (Karnataka Milk Federation) ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ಸೋಮವಾರ (ಸೆಪ್ಟೆಂಬರ್ 22) ರಿಂದ ನಂದಿನಿ ಬ್ರಾಂಡ್ನ ತುಪ್ಪ, ಬೆಣ್ಣೆ, ಚೀಸ್, ಪನ್ನೀರ್, ಗುಡ್ ಲೈಫ್ ಹಾಲು, ಐಸ್ಕ್ರೀಮ್, ಚಾಕಲೇಟ್ ಸೇರಿದಂತೆ ಹಲವಾರು ಹಾಲು ಹಾಗೂ ಹಾಲಿನ ಉತ್ಪನ್ನಗಳ ದರದಲ್ಲಿ ಇಳಿಕೆ ತರಲಾಗಿದೆ.
ಈ ನಿರ್ಧಾರಕ್ಕೆ ನೂತನ ಜಿಎಸ್ಟಿ (GST) ದರ ಇಳಿಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಜಿಎಸ್ಟಿ ದರಗಳಲ್ಲಿ ಮಾಡಿರುವ ಬದಲಾವಣೆಯು ನಂದಿನಿ ಉತ್ಪನ್ನಗಳ ದರ ಇಳಿಕೆಗೆ ದಾರಿ ಮಾಡಿಕೊಟ್ಟಿದೆ. ತುಪ್ಪ, ಬೆಣ್ಣೆ, ಚೀಸ್ GST ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದ್ದು, ಪನ್ನೀರ್ ಮತ್ತು ಯುಹೆಚ್ಟಿ ಮಿಲ್ಕ್ (Good Life Milk) ಶೇ.5ರಿಂದ ಶೂನ್ಯಕ್ಕೆ (0%) ಹಾಗೂ ಐಸ್ಕ್ರೀಮ್, ಚಾಕ್ಲೆಟ್, ಕುಕ್ಕೀಸ್ ಶೇ.18ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಕೆಎಂಎಫ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಹೊಸ ದರಪಟ್ಟಿ ಬಿಡುಗಡೆ ಮಾಡಲಾಗಿದೆ. ಸೋಮವಾರದಿಂದಲೇ ಇವು ಜಾರಿಗೆ ಬರಲಿವೆ. ಈ ಹಿನ್ನಲೆಯಲ್ಲಿ ಗ್ರಾಹಕರು ಹೆಚ್ಚುವರಿ ಜಿಎಸ್ಟಿ ಭಾರದಿಂದ ಮುಕ್ತರಾಗಲಿದ್ದಾರೆ.




