
ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ನೆನಪಿಗಾಗಿ ನಿರ್ಮಿಸಲಾಗುತ್ತಿರುವ ನವೀನ ಸ್ಮಾರಕದ ನೀಲಿನಕ್ಷೆ (Blueprint) ಲೋಕಾರ್ಪಣೆಗೊಂಡಿದೆ. ಈ ಸ್ಮಾರಕ ನಿರ್ಮಾಣದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳೊಂದಿಗೆ ನಟ ಸುದೀಪ್ (Kiccha Sudeep) ಪ್ರಮುಖ ಪಾತ್ರವಹಿಸಿದ್ದಾರೆ.
ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ (Abhiman Studio) ಜಾಗದಲ್ಲಿ ನಡೆದ ಗಲಾಟೆಯ ಬಳಿಕ, ಅಭಿಮಾನಿಗಳು ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಷ್ಣುಸೇನೆ ಮತ್ತು ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ, ಸುದೀಪ್ ಅವರ ಸಹಕಾರದಿಂದ, ಹೊಸದಾಗಿ 2 ಎಕರೆ ಜಾಗ ಖರೀದಿ ಮಾಡಿ, ಕೆಂಗೇರಿ ಬಳಿ ನೂತನ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಇನ್ನು ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಅವರ ಮುಂದಿನ ಜನ್ಮದಿನದೊಳಗಾಗಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲು ಪ್ಲ್ಯಾನ್ ಸಿದ್ಧವಾಗಿದೆ. ಇನ್ನು ಈ ಯೋಜನೆಗೆ ಕಿಚ್ಚ ಸುದೀಪ್ ತಮ್ಮದೇ ಆದ ಹಣದಿಂದ ಜಾಗ ಖರೀದಿಸಿ ನೀಡಿರುವುದು ಅಭಿಮಾನಿಗಳ ಹೃದಯ ಗೆದ್ದಿದೆ. ಈ ಸ್ಮಾರಕಕ್ಕೆ “ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ” ಎಂಬ ಹೆಸರಿಡಲು ಸಜ್ಜಾಗಿದೆ. ಇದು ದೇಶದಲ್ಲೇ ಅಭಿಮಾನಕ್ಕಾಗಿ ಅಭಿಮಾನಿಗಳು ಕಟ್ಟಿಸಲಿರುವ ಮೊಟ್ಟಮೊದಲ ಬೃಹತ್ ಸ್ಮಾರಕ ಎಂದು ವಿಷ್ಣುಸೇನೆ ಘೋಷಿಸಿಕೊಂಡಿದೆ.




