
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೊಡ್ಡ ಶಾಕ್ ನೀಡಿದೆ. ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಫೋನ್ಪೇ, ಪೇಟಿಎಂ, ಕ್ರೆಡ್ ಮತ್ತು ಅಮೆಜಾನ್ ಪೇ ನಂತಹ ಪ್ರಮುಖ ಫಿನ್ಟೆಕ್ ಪ್ಲಾಟ್ಫಾರ್ಮ್ಗಳು ರೆಂಟ್ ಪೇಮೆಂಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಕಳೆದ ಕೆಲವು ವರ್ಷಗಳಿಂದ ಈ ಪ್ಲಾಟ್ಫಾರ್ಮ್ಗಳು ಬಾಡಿಗೆ ಪಾವತಿಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಮಾಡಲು ಅವಕಾಶ ನೀಡುತ್ತಿದ್ದು, ಗ್ರಾಹಕರಿಗೆ ರಿವಾರ್ಡ್ ಪಾಯಿಂಟ್ಗಳು ಮತ್ತು ಕ್ಯಾಶ್ಬ್ಯಾಕ್ ಮೂಲಕ ಹೆಚ್ಚುವರಿ ಲಾಭ ಒದಗಿಸುತ್ತಿದ್ದವು. ಆದರೆ, ಸೆಪ್ಟೆಂಬರ್ 15 ರಿಂದ ಆರ್ಬಿಐ ಹೊಸ ನಿಯಮ ಜಾರಿಗೆ ತಂದ ನಂತರ ಈ ಸೌಲಭ್ಯ ನಿಲ್ಲಿಸಲಾಗಿದೆ.

ರಿಸರ್ವ್ ಬ್ಯಾಂಕ್ ಹೊಸ ಪಾವತಿ ಸಂಗ್ರಾಹಕ (Payment Aggregator) ಮತ್ತು ಪಾವತಿ ಗೇಟ್ವೇ (Payment Gateway) ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಪ್ರಕಾರ, ಪಾವತಿ ಸಂಗ್ರಾಹಕ ಸಂಸ್ಥೆಗಳು ನೇರ ಒಪ್ಪಂದ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಹಣ ಒಟ್ಟುಗೂಡಿಸಬೇಕು. ಜೊತೆಗೆ, ಪಾವತಿ ಗೇಟ್ವೇಗಳು ಮಾರುಕಟ್ಟೆ ಸ್ಥಳದಂತೆ ಕಾರ್ಯನಿರ್ವಹಿಸಬಾರದು ಎಂದು RBI ಸ್ಪಷ್ಟ ಸೂಚನೆ ನೀಡಿದೆ. ಹೀಗಾಗಿ, ಬಾಡಿಗೆ ಪಾವತಿ ಮಾಡಲು ಬಯಸುವವರು ಸಂಪೂರ್ಣ KYC (Know Your Customer) ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಫಿನ್ಟೆಕ್ ಆಪ್ಗಳು ಅವರ ಬಾಡಿಗೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ, KYC ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ವಂಚನೆ ಪ್ರಕರಣಗಳು. ಆರ್ಬಿಐ ಗಮನಿಸಿದಂತೆ, ಕೆಲವರು ಬಾಡಿಗೆಯ ಹೆಸರಿನಲ್ಲಿ ತಮ್ಮ ಸಂಬಂಧಿಕರ ಖಾತೆಗೆ ಹಣ ವರ್ಗಾಯಿಸಿ, ನಂತರ ಅದನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಸರಿಯಾದ ಪರಿಶೀಲನೆ ಇಲ್ಲದೆ ಇಂತಹ ವಹಿವಾಟುಗಳು ನಡೆಯುತ್ತಿರುವುದರಿಂದ, ಭವಿಷ್ಯದಲ್ಲಿ ಯಾವುದೇ ದುರುಪಯೋಗವನ್ನು ತಪ್ಪಿಸಲು ಆರ್ಬಿಐ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.




