Earthquake : ಭೂಮಿಯಾಳದಿಂದ ಬರುತ್ತಿರುವ ಭಾರೀ ಶಬ್ದ ಹಾಗೂ ಭೂಮಿ ನಡುಗಿರುವ ಅನುಭವ ವಿಜಯಪುರ ಜಿಲ್ಲೆಯ ಜನರ ನಿದ್ದೆಗಡೆಸಿದೆ.

ವಿಜಯಪುರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕಳೆದ ಕೆಲವು ದಿನಗಳಿಂದ ಭೂಮಿಯಾಳದಿಂದ ಭಾರೀ ಶಬ್ದಗಳು ಕೇಳಿ ಬರುತ್ತಿದ್ದು, ಜನರಿಗೆ ಭೂಮಿ ನಡುಗುತ್ತಿರುವ ಅನುಭವವಾಗಿದೆ. ಈ ಘಟನೆಗಳಿಂದ ಜಿಲ್ಲೆಯ ಜನರ ನಿದ್ದೆಗಡೆಸಿದೆ.
ಎರಡು ತಿಂಗಳಲ್ಲಿ 12ಕ್ಕೂ ಹೆಚ್ಚು ಬಾರಿ ಕಂಪನ ಅನುಭವ
ಕಳೆದ ಎರಡು ತಿಂಗಳಲ್ಲಿ ವಿಜಯಪುರ, ಸಿಂದಗಿ ಹಾಗೂ ಬಸವನಬಾಗೇವಾಡಿ ತಾಲೂಕಿನ ಭಾಗಗಳಲ್ಲಿ 12ಕ್ಕೂ ಹೆಚ್ಚು ಬಾರಿ ಭೂಕಂಪನದಂತ ಕಂಪನ ಹಾಗೂ ಶಬ್ದಗಳು ದಾಖಲಾಗಿವೆ. ಕಳೆದ ಅಕ್ಟೋಬರ್ 21ರಂದು 2.9 ರಿಕ್ಟರ್ ಮಾಪನದ ತೀವ್ರತೆಯ ಭೂಕಂಪನ ದಾಖಲಾಗಿತ್ತು. ಇದರಿಂದ ಜನ ಬೆಚ್ಚಿಬಿದ್ದು ಮನೆಗಳಿಂದ ಹೊರಗೆ ಓಡಿಬಂದಿದ್ದರು.
ರಾತ್ರಿ ವೇಳೆಯ ಶಬ್ದಗಳು ಜನರ ನಿದ್ದೆ ಕದಡುತ್ತಿದೆ
ರಾತ್ರಿ ವೇಳೆಯಲ್ಲೇ ಹೆಚ್ಚು ಪ್ರಮಾಣದಲ್ಲಿ ನೆಲದಿಂದ ಭಾರೀ ಶಬ್ದಗಳು ಕೇಳಿ ಬರುತ್ತಿವೆ. ನೆಲ ನಡುಗಿದ ಅನುಭವದಿಂದ ಜನರು ಆತಂಕಗೊಂಡು ನಿದ್ರೆಯನ್ನೂ ಕಳೆದುಕೊಂಡಿದ್ದಾರೆ. “ಯಾವಾಗ ಏನಾಗುತ್ತದೆಯೋ?” ಎಂಬ ಭಯದ ಮನಸ್ಥಿತಿಯಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ.
ಇದನ್ನು ಓದಿ : ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಹರ್ಷಿಕಾ-ಭುವನ್

ಹಿಂದೆ ಇದೇ ರೀತಿಯ ಅನುಭವ – ವಿಜ್ಞಾನಿಗಳ ವರದಿ ನೆನಪಾಗಿದೆ
ನಾಲ್ಕು ವರ್ಷಗಳ ಹಿಂದೆಯೂ ಇದೇ ರೀತಿಯ ಅನುಭವ ವಿಜಯಪುರ ಜಿಲ್ಲೆಯಲ್ಲಿ ದಾಖಲಾಗಿತ್ತು. ಆಗ ದೆಹಲಿ ಮತ್ತು ಹೈದರಾಬಾದ್ನಿಂದ ಬಂದ ಭೂಗರ್ಭ ವಿಜ್ಞಾನಿಗಳ ತಂಡ ಪರೀಕ್ಷೆ ನಡೆಸಿತ್ತು.
ಪರಿಣಿತರು ಆಗ ನೀಡಿದ ವರದಿ ಪ್ರಕಾರ “ಈ ಶಬ್ದಗಳು ಹಾಗೂ ಕಂಪನಗಳು ಭೂಮಿಯಾಳದಲ್ಲಿ ನಡೆಯುವ ಪ್ರಕೃತಿಯ ವೈಜ್ಞಾನಿಕ ಪ್ರಕ್ರಿಯೆಗಳ ಫಲ. ಭಯಪಡುವ ಅಗತ್ಯವಿಲ್ಲ.”ಎಂದು ಜನರಿಗೆ ಭರವಸೆ ನೀಡಲಾಗಿತ್ತು.
ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು,“ಇದು ಮಳೆಗಾಲದಲ್ಲಿ ಭೂಮಿಯಾಳ ದಲ್ಲಿ ಉಂಟಾಗುವ ತೇವಾಂಶ ಮತ್ತು ಸುಣ್ಣದ ಕಲ್ಲಿನ ರಾಸಾಯನಿಕ ಪ್ರತಿಕ್ರಿಯೆಯಿಂದ ಉಂಟಾಗುವ ಪ್ರಕ್ರಿಯೆ. ವಿಜಯಪುರ ಜಿಲ್ಲೆ ಭೂಕಂಪನ ಪ್ರದೇಶವಲ್ಲ, ಆದ್ದರಿಂದ ಆತಂಕಪಡಬೇಕಿಲ್ಲ ಎಂದರು.”

ಜನರಲ್ಲಿ ಶಾಂತಿ ತರುವ ಪ್ರಯತ್ನ ಅಗತ್ಯ
ಸದ್ಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ಪರಿಣಿತರ ತಂಡದ ಮೂಲಕ ನಿಖರ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪರಿಣಿತರಿಂದ ವರದಿ ಸಿಕ್ಕ ನಂತರ ಜನರಲ್ಲಿ ಶಾಂತಿ ತರುವ ಕೆಲಸವೂ ನಡೆಯಲಿದೆ.
ಇದನ್ನು ನೋಡಿ : ವಿಜಯಪುರದಲ್ಲಿ ಭೂಕಂಪದ ಗುಮ್ಮ: 2 ತಿಂಗಳಲ್ಲಿ 12ಕ್ಕೂ ಹೆಚ್ಚು ಬಾರಿ ನಡುಗಿದ ಭೂಮಿ, ಕಾರಣವೇನು?




