
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾಗೊಂಡಿದೆ.
ಈ ಕುರಿತು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲವರಿಂದ ಪ್ರತಿರೋಧ ವ್ಯಕ್ತವಾಗಿತ್ತು. ಈ ಆಯ್ಕೆಯನ್ನು ಪ್ರಶ್ನಿಸಿ ಮೊದಲಿಗೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ರಾಜ್ಯ ಸರ್ಕಾರದ ನಿರ್ಧಾರವು ಸೂಕ್ತವಾಗಿದೆ ಎಂದು ಹೈಕೋರ್ಟ್ ಮನವಿ ವಜಾಗೊಳಿಸಿತ್ತು. ನಂತರ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಯಿತು. ಆದರೂ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿಂದಾದ ಪೀಠ ಅರ್ಜಿಯನ್ನು ವಜಾ ಮಾಡಿದೆ.
ದಸರಾ ಉದ್ಘಾಟನೆಗೆ ಆಹ್ವಾನಿತರಾದವರು ಹಿಂದೆ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಂತಹವರನ್ನು ಆಹ್ವಾನಿಸಿರುವುದು ಸರಿಯಲ್ಲ ಎಂದು ಪಿ.ಬಿ.ಸುರೇಶ್ ವಾದಿಸಿದರು. ವಾದದ ಸಂದರ್ಭದಲ್ಲೇ ನ್ಯಾಯಮೂರ್ತಿ ನಾಥ್ ಅವರು, ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶಿಸಿದರು. ಈ ಆದೇಶದಿಂದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸಿಕ್ಕಿದ್ದು, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಅತಿಥಿಯಾಗಿ ಪಾಲ್ಗೊಳ್ಳುವಲ್ಲಿ ಯಾವುದೇ ಕಾನೂನು ತಡೆಯಿಲ್ಲ ಎಂಬುದು ಸ್ಪಷ್ಟವಾಗಿದೆ




