
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸೇವೆಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ತಂದು, ಹೊಸ ಫೀಚರ್ಗಳನ್ನು ಪರಿಚಯಿಸಿದೆ. ಪಾಸ್ಬುಕ್ ಲೈಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಇದೀಗ ಸದಸ್ಯರು ಪಡೆಯಬಹುದಾಗಿದೆ. ಗುರುವಾರ ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಅವರು ಈ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸಿದರು.

ಹಿಂದಿನಂತೆ ಪಿಎಫ್ ಖಾತೆ ಪರಿಶೀಲನೆಗೆ ಅಥವಾ ಹಣ ವಿತ್ಡ್ರಾ ಮಾಡಲು ಸದಸ್ಯರು ಪ್ರತ್ಯೇಕವಾಗಿ ಮೆಂಬರ್ ಪೋರ್ಟಲ್ ಮತ್ತು ಪಾಸ್ಬುಕ್ ಪೋರ್ಟಲ್ಗಳಿಗೆ ಲಾಗಿನ್ ಆಗಬೇಕಾಗುತ್ತಿತ್ತು. ಆದರೆ ಈಗ, ಮೆಂಬರ್ ಪೋರ್ಟಲ್ನಲ್ಲೇ ‘ಪಾಸ್ಬುಕ್ ಲೈಟ್’ ಫೀಚರ್ ಮೂಲಕ ಪಿಎಫ್ ಖಾತೆ ವೀಕ್ಷಣೆಯ ಸೌಲಭ್ಯ ಲಭ್ಯವಾಗಿದೆ. ಇದರ ಮೂಲಕ ಪಾಸ್ಬುಕ್ ಪೋರ್ಟಲ್ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಪಾಸ್ಬುಕ್ನ್ನು ಹೆಚ್ಚಿನ ವಿವರಗಳೊಂದಿಗೆ ವೀಕ್ಷಿಸಲು ಬಯಸುವವರು ಮುಂದಿನಂತೆಯೇ ಪಾಸ್ಬುಕ್ ಪೋರ್ಟಲ್ ಬಳಸಬಹುದಾಗಿದೆ.
ಇದಲ್ಲದೆ, ಪಿಎಫ್ ಟ್ರಾನ್ಸ್ಫರ್ಗಳಿಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಯಾಗಿದೆ. ಸದಸ್ಯರು ಈಗ ಮೆಂಬರ್ ಪೋರ್ಟಲ್ನಿಂದಲೇ ಟ್ರಾನ್ಸ್ಫರ್ ಸರ್ಟಿಫಿಕೇಟ್ (Annexure K) ಅನ್ನು ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಹಿಂದೆ ಇದು ಕೇವಲ ಎರಡು ಪಿಎಫ್ ಆಫೀಸ್ಗಳ ನಡುವಿನ ವಿನಿಮಯದ ಮೂಲಕ ಮಾತ್ರ ಲಭ್ಯವಿತ್ತು.

ಪಿಎಫ್ ಕ್ಲೇಮ್ಗಳ ಅನುಮೋದನೆ ಪ್ರಕ್ರಿಯೆಯಲ್ಲಿಯೂ ಸುಧಾರಣೆ ಮಾಡಲಾಗಿದೆ. ಟ್ರಾನ್ಸ್ಫರ್, ಸೆಟಲ್ಮೆಂಟ್, ಅಡ್ವಾನ್ಸ್ ಮತ್ತು ರೀಫಂಡ್ಗಳಿಗೆ ಸಂಬಂಧಿಸಿದ ಮನವಿಗಳಿಗೆ ಈಗ ಕೆಳಮಟ್ಟದ ಅಧಿಕಾರಿಗಳಿಗೂ ಅನುಮೋದನೆ ನೀಡುವ ಅಧಿಕಾರ ನೀಡಲಾಗಿದೆ. ಇದರಿಂದ ಸದಸ್ಯರಿಗೆ ತ್ವರಿತ ಸೇವೆ ಸಿಗುವ ನಿರೀಕ್ಷೆಯಿದೆ.
ಒಟ್ಟಾರೆ, ಇತ್ತೀಚಿನ ಈ ಬದಲಾವಣೆಗಳಿಂದ ಪಿಎಫ್ ಸದಸ್ಯರಿಗೆ ಸುಲಭ, ವೇಗ ಮತ್ತು ಪಾರದರ್ಶಕ ಸೇವೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




