
ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ರಾಜ್ಯ ಸರ್ಕಾರ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಆಯ್ಕೆ ವಿರೋಧಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ವಿಚಾರಣೆ ಮಾಡಲಿದೆ.
ಮೈಸೂರು ದಸರಾ ಉದ್ಘಾಟಕರ ಆಯ್ಕೆಗೆ ವಿರುದ್ಧವಾಗಿ ಲೋಕಸಭೆ ಸದಸ್ಯ ಪ್ರತಾಪ್ ಸಿಂಹ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠ, ಸರ್ಕಾರದ ಆಯ್ಕೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆದಿಲ್ಲವೆಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾ ಮಾಡಿತ್ತು.
ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದ ಮುಂದೆ ಅರ್ಜಿ ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ. ಸೆಪ್ಟೆಂಬರ್ 22ರಂದು ದಸರಾ ನವರಾತ್ರಿ ಮಹೋತ್ಸವ ಉದ್ಘಾಟನೆಯಿರುವ ಹಿನ್ನೆಲೆಯಲ್ಲಿ ತ್ವರಿತ ನಿರ್ಣಯ ಅಗತ್ಯವಿದೆ ಎಂದು ವಾದಿಸಲಾಗಿದೆ.
ಅರ್ಜಿದಾರರ ವಕೀಲರು, ಬಾನು ಮುಷ್ತಾಕ್ ಅವರು ಹಿಂದೂ ಧರ್ಮ ವಿರೋಧಿ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆ, ಅವರ ಉಸ್ತುವಾರಿ ಜನ ಭಾವನೆಗಳಿಗೆ ಧಕ್ಕೆಯಾದೀತು ಎಂದು ಒತ್ತಡ ನೀಡಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಇಂದು ಈ ಮೇಲ್ಮನವಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ.




