
ಸ್ವಾಭಿಮಾನ ಅನ್ನೋ ವಿಚಾರಕ್ಕೆ ಬಂದರೆ ಮನುಷ್ಯ ತನ್ನನ್ನು ತಾನು ಬಿಟ್ಟುಕೊಡುವುದಿಲ್ಲ. ಎಂತಹವರನ್ನಾದರೂ ಎದುರಿಸಬಲ್ಲ ಶಕ್ತಿ ಅವನಲ್ಲಿ ಇರುತ್ತದೆ. ತಾನು ಮಾಡದ ತನ್ನ ಬಗ್ಗೆ ಯಾರಾದ್ರೂ ತಪ್ಪು ಮಾತನಾಡಿದರೆ ತಿರುಗೇಟು ಕೊಡದೇ ಇರೋದಿಲ್ಲ. ಇಂತಹದ್ದೇ ಘಟನೆ ಇದೀಗ ಕೋಲಾರ ಜಿಲ್ಲೆಯಲ್ಲಿ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ಹೌದು… ಈ ಘಟನೆ ನಡೆದಿದೆ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿ ಸಮೀಪದಲ್ಲಿ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪುತ್ರ ನಿಶಾಂತ್ ಒಡೆತನದ ಸನ್ಮಾರ್ಗ ಬಿಲ್ಡರ್ಸ್ ಕಂಪನಿಯವರು ನಡೆಸುತ್ತಿರುವ ಕಟ್ಟಡ ಕಾಮಗಾರಿಯ ಬಗ್ಗೆ ವಿವಾದ ಉಂಟಾಗಿದೆ.
ಅನಿಗಾನಹಳ್ಳಿ ಸರ್ವೆ ನಂ. 37/1ರ 1.13 ಎಕರೆ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಆದೇಶವಿದ್ದರೂ, ಶಾಸಕರು ಮತ್ತು ಪುತ್ರ ಇಬ್ಬರು ಸೇರಿ ಕಾಮಗಾರಿ ಮುಂದುವರಿಸುತ್ತಿದ್ದಾರೆ ಎಂದು ಮೃತ ಪಾರ್ವತಮ್ಮ ಪುತ್ರ ಎ.ಎನ್.ಎಸ್ ಗೌಡ ಹಾಗೂ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಈ ವಿಚಾರದಲ್ಲಿ ಶಾಸಕ ನಾರಾಯಣಸ್ವಾಮಿ ಹಾಗೂ ನಿವೃತ್ತ ಉಪನ್ಯಾಸಕ ಎ.ಎನ್.ಎಸ್ ಗೌಡ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಾತಿನ ಭರದಲ್ಲಿ ಶಾಸಕ ನಾರಾಯಣಸ್ವಾಮಿ “ನೀನು ಹುಚ್ಚನ ಆಗೆ ಮಾತನಾಡಬೇಡ” ಎಂದು ಹೇಳಿದ್ದಾರೆ. ಇದಕ್ಕೆ ತಕ್ಷಣ ಕೋಪಗೊಂಡ ನಿವೃತ್ತ ಉಪನ್ಯಾಸಕ ಗೌಡ “ನಾನಲ್ಲ ಹುಚ್ಚ, ನೀನೇ ಹುಚ್ಚ” ಎಂದು ತಿರುಗೇಟು ನೀಡಿದ್ದಾರೆ.
ಈ ಮಾತಿನ ಚರ್ಚೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಉಪನ್ಯಾಸಕ ಎ.ಎನ್.ಎಸ್ ಗೌಡ ಅವರ ಆರೋಪ ಪ್ರಕಾರ, ಶಾಸಕರು ಅತಿಕ್ರಮಣೆ ಮಾಡಿದ್ದಾರೆಯೆಂಬುದರ ಜೊತೆಗೆ, ಕುಟುಂಬದ ಸದಸ್ಯರಿಗೆ ಬೈಗಳೂ ಹಾಕಿದ್ದಾರೆ.
ಇದೀಗ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ಗಳು ಹರಿದಾಡುತ್ತಿದ್ದು, ಜನರು ಶಾಸಕರ ವರ್ತನೆಯನ್ನು “ಗೂಂಡಾ ನಡವಳಿಕೆ” ಎಂದು ಟೀಕಿಸುತ್ತಿದ್ದಾರೆ.




