
Raichur Bike and Cae Accident : ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಪೊತ್ನಾಳ ಗ್ರಾಮದ ಬಳಿ ನೆನ್ನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಮರಿಯಮ್ಮ (28) ಹಾಗೂ ಶೇಖರಪ್ಪ (25) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮರಿಯಮ್ಮ ಅವರ ಎರಡು ವರ್ಷದ ಮಗಳು ಗೌತಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂಧನೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರೆಗುಡ್ಡ ಗ್ರಾಮದಲ್ಲಿ ಶನಿವಾರ ಜಾತ್ರೆ ಇತ್ತು. ಹೀಗಾಗಿ ಕರೆಗುಡ್ಡ ಗ್ರಾಮದ ನಿವಾಸಿಯಾದ ಶೇಖರಪ್ಪ ತಮ್ಮ ಅಕ್ಕನನ್ನು ಮರಿಯಮ್ಮನ ಜಾತ್ರೆಗೆ ಕರೆದುಕೊಂಡಲು ಬರಲು ವಲ್ಕಂದಿನ್ನಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ಅಕ್ಕ ಹಾಗೂ ಅವರ ಎರಡು ವರ್ಷದ ಮಗಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಕರೆಗುಡ್ಡ ಗ್ರಾಮಕ್ಕೆ ಬರುತ್ತಿರುವಾಗ ಕೊಪ್ಪಳದ ದೇಸಾಯಿ ಕ್ಯಾಂಪ್ಗೆ ತೆರಳುತ್ತಿದ್ದ ಕಾರೊಂದು ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಇನ್ನೊಂದು ಕಾರ್ ಡಿಕ್ಕಿ ಹೊಡೆದಿದ್ದು, ಆ ಕಾರು ಪಲ್ಟಿಯಾಗಿದೆ. ಬೈಕ್ ಮೇಲಿಂದ ಸವಾರರು ಕೆಳಗೆ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಮಾಹಿತಿ ದೊರಕಿದ ತಕ್ಷಣ ಮಾನವಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




