
DASARA MYSURU 2025 : ನಾಡಹಬ್ಬ ಮೈಸೂರು ದಸರಾ ಅದ್ಧೂರಿಯಾಗಿ ನೆರವೇರುತ್ತಿದ್ದು, ಅದರ ಭಾಗವಾಗಿ ಮೈಸೂರಿನ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದ ಬಳಿಯ ಬನ್ನಿ ಮರಕ್ಕೆ ಮೈಸೂರಿನ ರಾಜಕುಲದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (YADUVEER WADIYAR) ಪೂಜೆ ಸಲ್ಲಿಸಿದರು.
ವಜ್ರಮುಷ್ಠಿ ಕಾಳಗ ಮುಕ್ತಾಯವಾದ ಬಳಿಕ, ಭಕ್ತಿಭಾವಪೂರ್ಣವಾದ ವಿಜಯಯಾತ್ರೆಯು ಭುವನೇಶ್ವರಿ ದೇವಾಲಯದವರೆಗೆ ನಡೆಯಿತು. ದೇವಿಯ ದರ್ಶನ ನಂತರ ಯದುವೀರ್ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಾಡಹಬ್ಬದ ಧಾರ್ಮಿಕ ಅಂಗವನ್ನು ಪೂರ್ಣಗೊಳಿಸಿದರು.
ಈ ಮಹತ್ತರ ಕ್ಷಣದಲ್ಲಿ ಪಟ್ಟದ ಆನೆ, ಕುದುರೆ, ಹಸುಗಳು ಹಾಗೂ ಪೊಲೀಸ್ ಬ್ಯಾಂಡ್ ದಳ ಸಹ ಭಾಗವಹಿಸಿ ವಿಜಯಯಾತ್ರೆಗೆ ವೈಭವ ಹೆಚ್ಚಿಸಿತ್ತು. ಈ ಮೆರವಣಿಗೆಯಲ್ಲಿ ಖಾಸಾ ಆಯುಧಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಶ್ರೀಕಂಠದತ್ತ ನರ್ಸಿಂಗರಾಜ ಒಡೆಯರ್ ಅವರು ಬಳಸುತ್ತಿದ್ದ ಐತಿಹಾಸಿಕ ಕಾರಿನಲ್ಲಿ ಯದುವೀರ್ ತಮ್ಮ ವಿಜಯಯಾತ್ರೆ ಯಲ್ಲಿ ಭಾಗವಹಿಸಿದರು.




