Teacher dies of heart attack during caste census in chikkaballapura : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಯಲ್ಲಿ ಜಾತಿ ಗಣತಿ ಕರ್ತವ್ಯ ನಿರತರಾಗಿದ್ದಾಗ ಹೃದಯಾಘಾತದಿಂದ ಮುಖ್ಯಶಿಕ್ಷಕರು ಮೃತಪಟ್ಟ ದುಃಖದ ಘಟನೆ ನಡೆದಿದೆ. ಬೂರಗಮಾಕಲಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣಪ್ಪ (57) ಅವರು, ದಿಗವಕೋಟೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿದ್ದು, ಜಾತಿ ಗಣತಿ ಕಾರ್ಯದಲ್ಲಿ ಭಾಗವಹಿಸುತ್ತಿದ್ದರು.
ನೆನ್ನೆ ಅವರು ತಮ್ಮ ಕರ್ತವ್ಯದಲ್ಲಿದ್ದಾಗ ಅವರ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಮುರಗಮಲ್ಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಚಿಂತಾಮಣಿ ನಗರದ ಡೆಕನ್ ಆಸ್ಪತ್ರೆಗೆ ತುರ್ತಾಗಿ ಸ್ಥಳಾಂತರಿಸಲಾಯಿತು. ವೈದ್ಯರು ಚಿಕಿತ್ಸೆ ನೀಡಿದರೂ ಅವರು ಚೇತರಿಸಿಕೊಳ್ಳದೆ ಕೊನೆಯುಸಿರೆಳೆದಿದ್ದಾರೆ.
ಈ ದುರಂತದಿಂದ ಶಿಕ್ಷಣ ಕ್ಷೇತ್ರ ಹಾಗೂ ಗ್ರಾಮಸ್ಥರಲ್ಲಿ ಆಘಾತ ಮೂಡಿದೆ. ಪ್ರಾಮಾಣಿಕ ಶಿಕ್ಷಕರಾಗಿ ಹೆಸರಾಗಿದ್ದ ರಾಮಕೃಷ್ಣಪ್ಪ ಅವರ ಸಾವಿನ ಸುದ್ದಿ ಕೇಳಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶೋಕ ವ್ಯಕ್ತಪಡಿಸಿದ್ದಾರೆ.