
Chitradurga Cast Census 2025 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) (Cast Survey) ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ, ಚಿತ್ರದುರ್ಗ ಜಿಲ್ಲೆಯಲ್ಲಿ 68 ಸಿಬ್ಬಂದಿಗೆ ನೋಟಿಸ್ (Notice) ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಸಿಬ್ಬಂದಿಗೆ ಸರಿಯಾದ ತರಬೇತಿ ಮತ್ತು ಸೂಚನೆಗಳನ್ನೂ ನೀಡಲಾಗಿದೆ. ಆದರೆ ನಿಗದಿತ ವೇಳೆಯಲ್ಲಿ ಈ 68 ಗಣತಿದಾರರು ಕಾರ್ಯಪ್ರವೃತ್ತರಾಗದೇ ಗೈರಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹಿತ ನೋಟಿಸ್ (notice)ನೀಡಿದೆ.
68 ಗಣತಿದಾರರು ಈವರೆಗೆ ಸಮೀಕ್ಷೆಗೆ (Survey) ವರದಿ ಮಾಡಿಕೊಂಡಿಲ್ಲ. ಈ ಹಿನ್ನೆಲೆ ಗೈರಾಗಿ ನಿರ್ಲಕ್ಷ್ಯ ವಹಿಸಿದ 68 ಮಂದಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಇನ್ನು ಗೈರಾದವರಿಗೆ ನೋಟಿಸ್ ಒಂದೆಡೆಯಾದರೆ ಶಿಕ್ಷಕಿಯೊಬ್ಬರು (Teacher) ಕೇವಲ 5 ದಿನದಲ್ಲೇ ಸಮೀಕ್ಷೆ ಕಾರ್ಯ ಮುಗಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದಾಸರ್ಲಹಳ್ಳಿ ಗ್ರಾಮದಲ್ಲಿ ಶಿಕ್ಷಕಿ (Teacher) ಎಂ.ರಾಧಾ ತ್ವರಿತಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದಾರೆ.




