BENGALURU : ಬೆಂಗಳೂರು ಹೊರವಲಯದ ಹೆಸರಘಟ್ಟದ ಕೆರೆಯಲ್ಲಿ ನಿನ್ನೆ (ಭಾನುವಾರ) ಭೀಕರ ದುರಂತವೊಂದು ನಡೆದಿದೆ. ಮೀನಿಗೆ ಬಲೆ ಹಾಕಲು ತೆರಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವ್ಯಾಪಕ ವಿಷಾದವನ್ನುಂಟುಮಾಡಿದೆ.
ಮೃತರನ್ನು ಆನಂದ (32) ಹಾಗೂ ಅನಂತ (27) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಕೆರೆಯ ಮಧ್ಯಭಾಗಕ್ಕೆ ತೆಪ್ಪ ದಲ್ಲಿ ತೆರಳಿ ಮೀನಿಗೆ ಬಲೆ ಹಾಕುತ್ತಿದ್ದರು. ಈ ವೇಳೆ ತೆಪ್ಪದ ಹುಟ್ಟು ಕೈ ತಪ್ಪಿ ನೀರಿಗೆ ಬಿದ್ದಿತ್ತು. ಆನಂದ ತಕ್ಷಣವೇ ಧುಮುಕಿ ತೆಪ್ಪ ಹಿಡಿದು ಕೊಳ್ಳಲು ಯತ್ನಿಸಿದನು. ಆತನನ್ನು ರಕ್ಷಿಸಲು ಅನಂತ ಸಹ ಧುಮುಕಿದ, ಆದರೆ ಇಬ್ಬರೂ ನೀರಿನ ಒತ್ತಡ ಹಾಗೂ ಆಳದ ಕಾರಣದಿಂದ ಮುಳುಗಿ ಸಾವನ್ನಪ್ಪಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಸೋಲದೇವನಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.