
KALBURGI RAIN ALERT : ರಾಜ್ಯದ ಹಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದು, ಕಲಬುರಗಿ ಜಿಲ್ಲೆಗೆ ಆರೆಂಜ್ ಅಲರ್ಟ್ ಪ್ರಕಟಿಸಲಾಗಿದೆ. ಇದೀಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಅಕಾಲಿಕ ಮಳೆ ಮಳೆಯಿಂದ ಕಲಬುರಗಿ ಜಿಲ್ಲೆಯ ರೈತರಿಗೆ ದೊಡ್ಡ ಆಘಾತವಿದೆ. ಹಲವೆಡೆ ಬೆಳೆಗೆ ನೀರು ನುಗ್ಗಿ ಹಾನಿಯಾಗಿದ್ದು, ರೈತರು ಆತಂಕದಲ್ಲಿ ಮುಳುಗಿದ್ದಾರೆ. ಕಲಬುರಗಿ ಜಿಲ್ಲೆ, ಸಾಮಾನ್ಯವಾಗಿ ಬಯಲು ಪ್ರದೇಶವೆಂದು ಪರಿಗಣಿಸಲ್ಪಡುವರೂ, ಇತ್ತೀಚಿನ ಭಾರಿ ಮಳೆಯಿಂದಾಗಿ ಮಲೆನಾಡಿನಂತಾಗಿದೆ.
ಇನ್ನು ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹದಿಂದ ಮನೆಗಳು, ಆಸ್ತಿ ಮತ್ತು ದಿನ ಬಳಕೆಯ ವಸ್ತುಗಳು ಹಾನಿಗೊಳ್ಳುತ್ತಿದ್ದು, ಸರ್ಕಾರ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ನಾವು ಪರಿಶೀಲಿಸಿದ್ದೇವೆ, ಇದು ರೈತರ ಬೆಳೆಗಳಿಗೆ ಅಪಾರ ಹಾನಿಯನ್ನುಂಟುಮಾಡಿದೆ. ನಮ್ಮ ಸರ್ಕಾರ ರೈತರೊಂದಿಗೆ ಇದೆ; ಬೆಳೆಗಳು ನಷ್ಟವಾದರೂ, ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಮುಂದುವರಿದ ಮಳೆಯ ಪರಿಣಾಮವಾಗಿ, ನದಿಗಳು ಉಕ್ಕಿ ಹರಿಯುತ್ತಿದ್ದು, ಕಲಬುರಗಿಯ ಸುಮಾರು 36 ಹಳ್ಳಿಗಳು ತೀವ್ರ ತೊಂದರೆ ಎದುರಿಸುತ್ತಿವೆ. ಜಿಲ್ಲಾಡಳಿತ ಜನರ ಸುರಕ್ಷತೆಗೆ ಕ್ರಮಗಳನ್ನು ಕೈಗೊಂಡಿದ್ದು, ಪರಿಹಾರ ಶಿಬಿರಗಳು, ಆಹಾರ ಮತ್ತು ಆಶ್ರಯ ವ್ಯವಸ್ಥೆಗಳನ್ನು ಕೂಡಾ ಕಲ್ಪಿಸಲಾಗಿದೆ.




