RAICHUR RAIN EFFECT : ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀಮಳೆಯ ಪರಿಣಾಮ ರಾಯಚೂರು ನಗರದಲ್ಲಿ ಹಳೆಯ ಕಟ್ಟಡಗಳು ಹಾನಿಗೆ ಒಳಗಾಗುತ್ತಿವೆ. ಇಂದು ಮಧ್ಯಾಹ್ನ ಗಂಜ್ ವೃತ್ತದ ಬಳಿ ಇರುವ ಹಳೆಯ ಮನೆಯೊಂದರ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಈಶಮ್ಮ (ಅಂದಾಜು 60) ಎಂದು ಗುರುತಿಸಲಾಗಿದ್ದು, ಮನೆಯಲ್ಲಿದ್ದ ತಾತ ಹಾಗೂ ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದಾರೆ. ಮನೆ ಬಹಳ ಹಳೆಯದಾಗಿದ್ದು, ಮಳೆ ಮತ್ತು ಗಾಳಿಯ ಕಾರಣದಿಂದ ಕಟ್ಟಡ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಪರಿಣಾಮ, ಎಫ್ಎಸ್ಒ ರಾಜು, ಎಎಫ್ಎಸ್ಒ ನರಸಪ್ಪ, ರಂಗಪ್ಪ, ಡಿ.ಕೆ ಶ್ರೀನಿವಾಸ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯ ಲಾಗಿದೆ. ಆದರೆ ಈಶಮ್ಮ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದು, ತೀವ್ರ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿ ದ್ದಾರೆ.