PUC ರಿಸಲ್ಟ್ ದಿನವೇ ಪ್ರಾಣಬಿಟ್ಟ ವಿದ್ಯಾರ್ಥಿನಿ – ಹೆತ್ತಮನ ಮೇಲೆಯೇ ಸಂಬಂಧಿಕರ ಅನುಮಾನ.

ದ್ವಿತೀಯ PUC ಫಲಿತಾಂಶ ಹೊರಬಿದ್ದ ದಿನವೇ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ತನುಶ್ರೀ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯ ಸಾವಿನ ಬಗ್ಗೆ ಹಲವು ಅನುಮಾನ
ಇನ್ನು ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು. ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಕಾರಣಕ್ಕೆ ತನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಆಶಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಇದೀಗ ವಿದ್ಯಾರ್ಥಿನಿಯ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ರೂ, ರಾತ್ರಿ 10 ಗಂಟೆಯವರೆಗೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇ ಅಲ್ದೇ, ಅಷ್ಟೇ ಅಲ್ಲದೆ, ಪೊಲೀಸರಿಗೆ ತಿಳಿಸದೆಯೇ 4-5 ಯುವಕರ ಸಹಾಯದಿಂದ ತಾಯಿಯೇ ಮೃತದೇಹವನ್ನು ಕೆಳಕ್ಕೆ ಇಳಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಮೃತದೇಹವನ್ನ ಇಳಿಸಿದ ಬಳಿಕ ಕೆ.ಜಿ. ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿದ ಬಳಿಕವಷ್ಟೇ ಪೊಲೀಸರಿಗೆ ಮಾಹಿತಿ ತಲುಪಿದೆ.
READ THIS : ಪ್ರೇಯಸಿ ಮದ್ವೆಗೆ ಒಪ್ಪದಕ್ಕೆ ಡೆತ್ನೋಟ್ ಬರೆದಿಟ್ಟು ಪ್ರಿಯಕರ ಸೂಸೈಡ್..!

ತಾಯಿಯೇ ಮಗಳನ್ನು ಕೊಂದು ನೇಣು ಹಾಕಿರಬಹುದು
ಇನ್ನು ತಾಯಿಯೇ ಮಗಳನ್ನು ಕೊಂದು ನೇಣು ಹಾಕಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದು ತಾಯಿಯ ಮೇಲೆಯೇ ಗಂಭೀರ ಆರೋಪ ಮಾಡ್ತಿದ್ದಾರೆ. ಮೃತಳ ಸಹೋದರ ಧನುಷ್ ಮಾತನಾಡಿ, ತನುಶ್ರೀ ತಾಯಿ ಆಶಾ ನನಗೆ ಚಿಕ್ಕಮ್ಮ ಆಗಬೇಕು. ತನುಶ್ರೀ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ. ಮಾನಸಿಕವಾಗಿ ಬಹಳ ಸ್ಟ್ರಾಂಗ್ ಆಗಿರುವ ಹೆಣ್ಣು ಮಗಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದರೆ ನಾವು ನಂಬಲ್ಲ. ನಮಗೆ ಅವಳ ತಾಯಿ ಆಶಾ ಮೇಲೆ ಅನುಮಾನ ಇದೆ. ತನುಶ್ರೀ ತಂದೆ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಅವರಪ್ಪ ಸತ್ತಿದ್ದೇ ಚಿಕ್ಕಮ್ಮಳ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿತ್ತು. ಈಗಲೂ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಕರೆದೊಯ್ದೆವು. ಆದ್ರೆ ಅವಳು ಬದುಕಲಿಲ್ಲ
ಇನ್ನು ಮೃತಳ ಸ್ನೇಹಿತೆ ಮಾತನಾಡಿ, ನಿನ್ನೆ ಪಿಯುಸಿ ರಿಸಲ್ಟ್ ಇತ್ತು. ನಾನು ತನುಶ್ರೀಗೆ ಮನೆಗೆ ಬಾ ಅಂತ ಮೆಸೇಜ್ ಮಾಡಿದ್ದೆ. ಅವಳು ಬರ್ತೀನಿ ಅಂತ ರಿಪ್ಲೈ ಮಾಡಿದ್ದಳು. ಆದ್ರೆ, ರಿಸಲ್ಟ್ ಬಂದ ಮೇಲೆ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ನಾನು ಮನೆ ಬಳಿ ಬಂದು ನೋಡಿದಾಗ, ತನುಶ್ರೀ ನೇಣು ಹಾಕಿಕೊಂಡಿದ್ಳು. ನಮಗೆ ತುಂಬಾ ಭಯ ಆಯ್ತು. ತಕ್ಷಣ ನನ್ನ ತಂದೆಗೆ ಕಾಲ್ ಮಾಡಿ ಹೇಳಿದೆ. ಅವರು ಕೂಡಲೇ ಬಂದು ಡೋರ್ ಒಡೆದು, ಅವಳನ್ನು ಕೆಳಗೆ ಇಳಿಸಿದ್ರು. ಆ ಸಮಯದಲ್ಲಿ ಸ್ವಲ್ಪ ಉಸಿರಾಟ ಇತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದೆವು. ಆದ್ರೆ ಅವಳು ಬದುಕಲಿಲ್ಲ ಎಂದರು.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಸಂಬಂಧಿಕರ ದೂರಿನ ಮೇರೆಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಕೋನಗಳಿಂದ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸತ್ಯ ಬಹಿರಂಗವಾಗಲಿದೆ.
MUST WATCH : ZOMBIE ಡ್ರಗ್ನಲ್ಲಿ ತೇಲಾಡಿದ ವ್ಯಕ್ತಿ – ವಿಡಿಯೋ ವೈರಲ್ ಮಾಡಿದವರಿಗೆ ವಾರ್ನಿಂಗ್..!




