
Drug Case Of actress Sanjana Galrani : ಡ್ರಗ್ಸ್ ಪ್ರಕರಣ ಆರೋಪದ ಮೇಲೆ ಸಂಜನಾ ಗಲ್ರಾನಿ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಇಂದು ಸುಪ್ರೀಂ ಕೋರ್ಟ್ ಚಾಲನೆ ನೀಡಿದ್ದು, ನಟಿಯಿಂದ ಪ್ರತಿಕ್ರಿಯೆ ಕೋರಿ ನೋಟಿಸ್ ಜಾರಿ ಮಾಡಿದೆ.
ಪಂಚತಾರಾ ಪಾರ್ಟಿಗಳಿಗಾಗಿ ದೇಶದ ವಿವಿಧ ಭಾಗಗಳಿಂದ ಮಾದಕ ದ್ರವ್ಯಗಳನ್ನು (Drugs) ಖರೀದಿಸಿದ್ದಾರೆ ಎಂಬ ಗಂಭೀರ ಆರೋಪದ ಮೇರೆಗೆ ನಟಿ ಸಂಜನಾ ಸೇರಿದಂತೆ ಇತರರ ವಿರುದ್ಧ ದಾಖಲಾದ ಪ್ರಕರಣವನ್ನು ತಾಂತ್ರಿಕ ಅಂಶಗಳ ಆಧಾರದ ಮೇಲೆ ಕರ್ನಾಟಕ ಹೈಕೋರ್ಟ್ 2024ರ ಮಾರ್ಚ್ 25ರಂದು ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಇಂದು ಅರ್ಜಿಯ ವಿಚಾರಣೆ ನಡೆಸಿದ್ದು, ವಾದ-ಪ್ರತಿವಾದ ಆಲಿಸಿದ ನಂತರ, ನಟಿ ಸಂಜನಾ ಗಲ್ರಾನಿಯಿಂದ ಪ್ರತಿಕ್ರಿಯೆ ಪಡೆದುಕೊಳ್ಳಲು ನೋಟಿಸ್ ನೀಡಲು ಪೀಠ ತೀರ್ಮಾನಿಸಿದೆ.
ಈ ಹಿಂದೆ, ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮನ್ ಪನ್ವರ್, “ಆರೋಪಿಗಳ ಫೋನ್ಕಾಲ್ ದಾಖಲೆಗಳು ಮತ್ತು ಮೊಬೈಲ್ ಫೋನ್ಗಳ ವೈಜ್ಞಾನಿಕ ಪರೀಕ್ಷೆಗಳ ಮೂಲಕ ಅವರು ಎಕ್ಸ್ಟಸಿ (Ecstasy) , ಕೊಕೇನ್ (Cocaine), ಎಂಡಿಎಂಎ (MDMA), ಎಲ್ಎಸ್ಡಿ (LSD) ಮುಂತಾದ ಮಾದಕ ದ್ರವ್ಯಗಳನ್ನು ನೈಜೀರಿಯಾದ ಡ್ರಗ್ ಪೆಡ್ಲರ್ಗಳೊಂದಿಗೆ ಸಂಪರ್ಕ ಸಾಧಿಸಿ ಖರೀದಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿವೆ,” ಎಂದು ನ್ಯಾಯಾಲಯದ ಗಮನಕ್ಕೆ ತಂದರು.




