BENGALURU : ಕರ್ನಾಟಕದ ಜನತೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಬಹುಕಾಲದಿಂದ ಪ್ರತಿ ವರ್ಷವೂ ಕೇಳಿಬರುತ್ತಿದ್ದ ಬೆಂಗಳೂರಿನಿಂದ ಮುಂಬೈಗೆ ಸೂಪರ್ಫಾಸ್ಟ್ ರೈಲು ಸೇವೆ ಈಗ ಅಧಿಕೃತವಾಗಿ ಘೋಷಣೆಯಾಗಿದ್ದು, ಶೀಘ್ರದಲ್ಲೇ ಈ ಹೊಸ ರೈಲು ಸಂಚಲನಕ್ಕೆ ಬರಲಿದೆ.
ಈ ಕುರಿತು ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, "ಬೆಂಗಳೂರೂ ಮುಂಬೈ ಕೂಡ ದೇಶದ ಪ್ರಮುಖ ಆರ್ಥಿಕ ನಗರ ಗಳು. ಈ ಎರಡನ್ನು ಸಂಪರ್ಕಿಸುವ ಸೂಪರ್ಫಾಸ್ಟ್ ರೈಲು ಸೇವೆ ಇದು. ತ್ವರಿತ, ಭದ್ರ ಹಾಗೂ ಕೈಗೆಟುಕುವ ದರದಲ್ಲಿ ಈ ರೈಲು ಸಂಚರಿಸಲಿದೆ," ಎಂದು ತಿಳಿಸಿದ್ದಾರೆ.
ಇದು ಕನ್ನಡಿಗರ ಬಹುದಿನಗಳ ಕನಸು. ಈ ಹಿಂದೆ ಈ ಮಾರ್ಗದಲ್ಲಿ ಉದ್ಯಾನ್ ಎಕ್ಸ್ಪ್ರೆಸ್ ಮಾತ್ರ ಇದ್ದು, 24 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ, ಕಳೆದ ವರ್ಷ ಈ ಮಾರ್ಗದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯು 26 ಲಕ್ಷದ ಗಡಿ ದಾಟಿದೆ. ಇದರಿಂದಾಗಿ ಸೂಪರ್ಫಾಸ್ಟ್ ರೈಲು ಅನಿವಾರ್ಯ ಎನಿಸಿತ್ತು.
ಇನ್ನು ಸಂಸದ ತೇಜಸ್ವಿ ಸೂರ್ಯ ಈ ಘೋಷಣೆಯ ಬೆನ್ನಲ್ಲೇ , "ಇದು ನಿಜವಾದ ‘ನೆನಪಿನ ಕ್ಷಣ’. 30 ವರ್ಷಗಳ ಬೇಡಿಕೆಗೆ ಕೊನೆ ಕೊಡುವ ಈ ಯೋಜನೆಯು ಲಕ್ಷಾಂತರ ಜನರಿಗೆ ಪ್ರಯಾಣದ ಅನುಕೂಲತೆ ನೀಡಲಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ. ಸಚಿವ ಅಶ್ವಿನಿ ವೈಷ್ಣವ್ ಅವರು ತೇಜಸ್ವಿ ಸೂರ್ಯನನ್ನು ಶ್ಲಾಘಿಸುತ್ತಾ, "ನೀವು ಸದಾ ಬೆಂಗಳೂರಿನ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೀರಿ. ಈ ಯೋಜನೆಗಾಗಿ ನಿಮ್ಮ ನಿರಂತರ ಹೋರಾಟ ಪ್ರಶಂಸನೀಯ," ಎಂದು ಹೇಳಿದರು.
ಇದೆ ಸಂದರ್ಭದಲ್ಲಿ, ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವೆ ವಿ.ಸೋಮಣ್ಣಗೆ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಇನ್ನು ಈ ಹೊಸ ಸೂಪರ್ಫಾಸ್ಟ್ ರೈಲು ಸೇವೆಯು ತ್ವರಿತವಾಗಿ ಜಾರಿಯಾಗಲಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಮುಂದಿನ ಕೆಲವು ತಿಂಗಳಲ್ಲಿ ಸೇವೆಗೆ ಬರಬಹುದು. ರೈಲಿನ ನಿಖರ ವೇಗ, ನಿಲ್ದಾಣಗಳು ಮತ್ತು ಟಿಕೆಟ್ ದರಗಳ ವಿವರಗಳು ಶೀಘ್ರದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ.