
BENGALURU : ಉತ್ತರ ಕರ್ನಾಟಕದ ಗೋಕರ್ಣ ಸಮುದ್ರ ತೀರದ ರಾಮತೀರ್ಥ ಬೆಟ್ಟದ ನಡುವಿನ ಗುಹೆಯಲ್ಲಿ ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾದ ಮಹಿಳೆಯನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದೆ.
ಗೋಕರ್ಣ ಸಮುದ್ರ ತೀರದ ರಾಮತೀರ್ಥದ ಹತ್ತಿರದಲ್ಲಿರುವ ಗುಡ್ಡದ ಗುಹೆಯಲ್ಲಿ ರಷ್ಯನ್ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು. ರಷ್ಯಾ ಮೂಲದ ನಿನಾ ಕುಟಿನಾ ಮತ್ತು ಆಕೆಯ 6 ಮತ್ತು 4 ವರ್ಷದ ಇಬ್ಬರು ಮಕ್ಕಳೊಂದಿಗೆ ಇದ್ದಿದ್ದು ಕಂಡುಬಂದಿದ್ದು, ಅವರನ್ನು ಪೊಲೀಸರು ಸುರಕ್ಷಿತವಾಗಿ ಕರೆತಂದಿದ್ದರು. ಮಾಮೂಲಿನಂತೆ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ಆ ದೂರದ ಬೆಟ್ಟದ ಗುಹೆಯ ಹೊರಗೆ ಬಟ್ಟೆ ಒಣಗಿ ಹಾಕಿದ್ದು ಕಾಣಿಸಿತ್ತು. ರೌಂಡ್ಸ್ ನಲ್ಲಿದ್ದ ಪೊಲೀಸರಿಗೆ ಗುಡ್ಡದ ಮೇಲಿನ ಲಿಂಗ ಪೂಜೆ ಮಾಡಿರುವುದು ಕಂಡಿದೆ. ಅನುಮಾನ ಬಂದು ಗುಹೆ ಒಳಗಡೆ ಹೋಗುತ್ತಿದ್ದಂತೆ ಬಟ್ಟೆ ಧರಿಸದ ಪುಟ್ಟ ಮಗು ಓಡಿ ಹೊರ ಬಂದಿದೆ. ಪೊಲೀಸರನ್ನು ನೋಡಿ ಒಳಗೆ ಓಡಿ ಹೋದ ಪುಟ್ಟ ಮಗುವಿನ ಹಿಂದೆ ಹೋದಾಗ ಚಿಕ್ಕ ದೀಪವನ್ನಿಟ್ಟುಕೊಂಡು ತನ್ನ ದೊಡ್ಡ ಮಗುವಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಿ ದ್ದ ಮಹಿಳೆ ಕಂಡಿದ್ದಳು.
ಆ ಗುಹೆ ಸಂಪೂರ್ಣ ಕತ್ತಲಾಗಿದ್ದು, ಸುತ್ತಲೂ ಹಾವುಗಳೂ ಇದ್ದವು. ಇದಲ್ಲದೆ ಆ ಪ್ರದೇಶದಲ್ಲಿ ಟ್ರೆಕ್ಕಿಂಗ್ ನಿಷೇಧಿತವಾಗಿದ್ದು, ಸುರಕ್ಷತೆಗಾಗಿ ಫೆನ್ಸಿಂಗ್ ಕೂಡ ಹಾಕಲಾಗಿದೆ. ಹೀಗಿದ್ದರೂ, ಆ ಮಹಿಳೆ ಮತ್ತು ಮಕ್ಕಳ ಗುಹೆಯಲ್ಲಿ ವಾಸಿಸುತ್ತಿ ದ್ದಿರುವುದು ಪೊಲೀಸರಿಗೆ ಅಚ್ಚರಿ ಆಗಿತ್ತು. ಇನ್ನು ಫೆನ್ಸಿಂಗ್ ಇದ್ದರೂ ಪಕ್ಕದ ಗುಡ್ಡದಿಂದ ಗುಹೆ ಒಳಗಡೆ ಹೋಗಿ ನೆಲೆಸಿದ್ದ ರಷ್ಯಾದ ಮಹಿಳೆ ಈ ಹಿಂದೆಯೂ ಬಹಳಷ್ಟು ಬಾರಿ ಈ ಗುಹೆಯಲ್ಲಿ ಬಂದು ನೆಲೆಸಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಳು.
ಈ ಪ್ರಕರಣದ ವಿಚಾರಣೆಯ ಭಾಗವಾಗಿ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ನ್ಯಾಯಮಂಡಳಿ ಈ ರಷ್ಯಾ ಮಹಿಳೆಯ ವಾಪಸು ದೇಶಕ್ಕೆ ಮರಳುವ ಬಗ್ಗೆ ಇಚ್ಛೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ಅಗತ್ಯ ದಾಖಲೆಗಳ ವ್ಯವಸ್ಥೆ ಮಾಡಬೇಕಾಗಿ ಸೂಚನೆ ನೀಡಿದೆ.




