
KALBURGI HEAVY RAIN : ಕಲಬುರಗಿಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಭಾರಿ ಮಳೆಯ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಡಿಡಿಪಿಐ ಸೂರ್ಯಕಾಂತ ಮದಾನೆ ಅವರು ಅಧಿಕೃತವಾಗಿ ಸುತ್ತೋಲೆ ಹೊರಡಿಸಿದ್ದಾರೆ.
ಇನ್ನು ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಈಗಾಗಲೇ ಆರೆಂಜ್ ಅಲರ್ಟ್ ಜಾರಿಗೆ ಬಂದಿದೆ.
ಶಾಲೆಗಳಿಗೆ ಈಗಾಗಲೇ ದಸರಾ ರಜೆಯಿದ್ದು, ಜಿಲ್ಲೆಯ ಕೆಲವು ಶಾಲೆಗಳ ಆಡಳಿತ ಮಂಡಳಿ ದಸರಾ ರಜೆಯಿಂದ ವಿನಾಯಿತಿ ಪಡೆದುಕೊಂಡು ಶಾಲೆಗಳನ್ನು ನಡೆಸುತ್ತಿವೆ. ಅಂತಹ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸೆ.27 ಹಾಗೂ 28ರಂದು ಎರಡು ದಿನ ಕಾಲ ರಜೆ ಘೋಷಿಸಿ ಆದೇಶ ಹೊರಡಿಸಿದ್ದು, ಈ ರಜಾ ಅವಧಿಯ ಪಾಠ ಬೋಧನೆಯನ್ನು ಮುಂದಿನ ರಜಾ ದಿನಗಳಲ್ಲಿ ಸರಿದೂಗಿಸಲು ಸೂಚಿಸಲಾಗಿದೆ.




