ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಾ Viral ಆಗಿದ್ದ ಮೊನಾಲಿಸಾ ಇದೀಗ ತನ್ನ ಗೆಳೆಯ ಫರ್ಮಾನ್ ಖಾನ್ ಜೊತೆ ಕೇರಳದ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ Viral ಹುಡುಗಿ ಮೊನಾಲಿಸಾ ತನ್ನ ಕಣ್ಣುಗಳ ಸೌಂದರ್ಯದಿಂದ ದೇಶಾದ್ಯಂತ ಗಮನ ಸೆಳೆದಿದ್ದರು.
ಒಬ್ಬ ಯೂಟ್ಯೂಬರ್ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಮೊನಾಲಿಸಾ ಕ್ಷಣಾರ್ಧದಲ್ಲೇ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿಬಿಟ್ಟಿದ್ದರು.

ಈಗ ಮತ್ತೆ ಮೊನಾಲಿಸಾ ಸುದ್ದಿಯಲ್ಲಿದ್ದಾರೆ. ಕಾರಣ, ಅವರು ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಜೊತೆ ದಿಢೀರ್ ಮದುವೆಯಾಗಿರುವುದು.
ಈ ಸುದ್ದಿ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಕೇರಳದ ದೇವಸ್ಥಾನದಲ್ಲಿ ವಿವಾಹ
ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಕೇರಳದ ತಿರುವನಂತಪುರಂ ಸಮೀಪದ ಪೂವರಿನ ಅರುಮಾನೂರ್ ನೈನಾರ್ ದೇವಸ್ಥಾನದಲ್ಲಿ ಮಾರ್ಚ್ 11ರಂದು ಸಂಜೆ ಸುಮಾರು 5:30ಕ್ಕೆ ವಿವಾಹವಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ದಂಪತಿ ಮಾತನಾಡಿದ್ದು, ಕೇರಳದ ಪರಿಸರ ಮತ್ತು ದೇವಸ್ಥಾನದ ಸ್ಥಳ ಇಷ್ಟವಾದ ಕಾರಣ ಇಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಕುಟುಂಬಗಳ ವಿರೋಧದ ನಡುವೆಯೇ ಮದುವೆ
ವರದಿಗಳ ಪ್ರಕಾರ, ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಬೇರೆ ಬೇರೆ ಧರ್ಮದವರಾಗಿರುವುದರಿಂದ ಈ ಸಂಬಂಧಕ್ಕೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು ಎನ್ನಲಾಗಿದೆ.

ಮೊನಾಲಿಸಾ ತಂದೆ ಜೈ ಸಿಂಗ್ ಅವರು ಮಗಳ ಮದುವೆಯನ್ನು ಮತ್ತೊಬ್ಬರೊಂದಿಗೆ ನಿಶ್ಚಯಿಸಲು ಪ್ರಯತ್ನಿಸಿದ್ದರು ಎಂಬ ಮಾಹಿತಿಯೂ ಹೊರಬಂದಿದೆ.
ಆದರೆ ಈ ಪರಿಸ್ಥಿತಿಯಲ್ಲಿ ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಇಬ್ಬರೂ ಕೇರಳಕ್ಕೆ ತೆರಳಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ಫರ್ಮಾನ್ ಖಾನ್ ಯಾರು?
ಫರ್ಮಾನ್ ಖಾನ್ ಮಹಾರಾಷ್ಟ್ರ ಮೂಲದವರಾಗಿದ್ದು, ಅವರು ನಟನೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ಅವರು ತಮ್ಮನ್ನು ನಟ ಎಂದು ಪರಿಚಯಿಸಿಕೊಂಡಿದ್ದಾರೆ.
ಮೊನಾಲಿಸಾವನ್ನು ಮೊದಲು ಒಂದು ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಭೇಟಿಯಾದೆ ಎಂದು ಹೇಳಿದ್ದು, ಸ್ನೇಹದಿಂದ ಆರಂಭವಾದ ಪರಿಚಯ ನಂತರ ಪ್ರೀತಿಯಾಗಿ ಮಾರ್ಪಟ್ಟಿತು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಮೊನಾಲಿಸಾ ಮದುವೆಯ ಸುದ್ದಿ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಕೆಲವರು ಈ ವಿವಾಹವನ್ನು ಬೆಂಬಲಿಸುತ್ತಿದ್ದರೆ, ಇನ್ನೂ ಕೆಲವರು ಪ್ರಶ್ನೆ ಎತ್ತುತ್ತಿದ್ದಾರೆ.
ವಿಶೇಷವಾಗಿ ಮೊನಾಲಿಸಾ ವಯಸ್ಸಿನ ಕುರಿತು ಕೂಡ ಕೆಲವರು ಸಂಶಯ ವ್ಯಕ್ತಪಡಿಸಿದ್ದು, ಈ ವಿಷಯವೂ ಚರ್ಚೆಗೆ ಗ್ರಾಸವಾಗಿದೆ.

ತಂದೆಯ ವಿರುದ್ಧ ದೂರು ನೀಡಿದ್ದ ಮೊನಾಲಿಸಾ
ಮಾಹಿತಿಯ ಪ್ರಕಾರ, ಕೇರಳದ ಪೂವರಿನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಮೊನಾಲಿಸಾ ತಂಬಾನೂರು ಪೊಲೀಸ್ ಠಾಣೆಗೆ ತೆರಳಿ ತಂದೆಯ ವಿರುದ್ಧ ದೂರು ನೀಡಿದ್ದರು.
ತಂದೆ ಸಂಬಂಧಿಕನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಂತರ ಪೊಲೀಸರು ಜೈ ಸಿಂಗ್ ಅವರನ್ನು ಠಾಣೆಗೆ ಕರೆಸಿ ಮಾತನಾಡಿ, ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮೊನಾಲಿಸಾಗೆ ಇದೆ ಎಂದು ಮನವರಿಕೆ ಮಾಡಿದರು.
ಇದಾದ ಬಳಿಕ ಮೊನಾಲಿಸಾ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಜೊತೆ ಹೋಗಲು ಅನುಮತಿ ನೀಡಲಾಗಿದ್ದು, ನಂತರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿರುವುದಾಗಿ ತಿಳಿದುಬಂದಿದೆ.




