
DASARA SPECIAL : ದಸರಾ ಹಬ್ಬ, ಸಾಲು ಸಾಲು ರಜೆಗಳನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ತಮ್ಮ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಬೆಂಗಳೂರು ಹಾಗೂ ಮಹಾರಾಷ್ಟ್ರದ ತುಳಜಾಪುರದತ್ತ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ 500 ಹೆಚ್ಚುವರಿ ಬಸ್ಗಳನ್ನು ಸಂಚಾರಕ್ಕೆ ಬಿಡುಗಡೆ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ,”ಸೆಪ್ಟೆಂಬರ್ 26 (ಇಂದು) ರಿಂದ ಸೆಪ್ಟೆಂಬರ್ 29ರ ವರೆಗೆ ಜಿಲ್ಲೆಯ ಪ್ರಮುಖ ಕೇಂದ್ರಗಳಿಂದ ಬೆಂಗಳೂರು, ತುಳಜಾಪುರ ಮತ್ತು ಇತರೆ ಸ್ಥಳಗಳಿಗೆ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಇದೇ ರೀತಿ ಸೆ.27 ಮತ್ತು ಸೆ.30ರಂದು ಬೆಂಗಳೂರಿನಿಂದ ವಾಪಸ್ ಹೊರಡುವ ಪ್ರಯಾಣಿಕರ ಅನುಕೂಲಕ್ಕಾಗಿ ಕೂಡ ಬಸ್ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಇನ್ನು ಹಬ್ಬ ಮತ್ತು ರಜೆಗಳ ನಂತರದ ಅಕ್ಟೋಬರ್ 3ರಿಂದ 5ರ ವರೆಗೆ ಕೂಡ, ಹೆಚ್ಚಿನ ಪ್ರಯಾಣ ದಟ್ಟಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಬಸ್ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಲಾಗಿದೆ. ಈ ಕ್ರಮದಿಂದಾಗಿ ದಸರಾ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸಾಮಾನ್ಯ ಬಸ್ ಸೇವೆಗೆ ಯಾವುದೇ ಅಡಚಣೆ ಆಗದಂತೆ KKRTC ಬದಲಿ ವ್ಯವಸ್ಥೆಗಳನ್ನು ಮಾಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.




