Karnataka : ಕರ್ನಾಟಕದಾದ್ಯಂತ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮತ್ತು ಹಣ ಜಪ್ತಿ ಮಾಡುತ್ತಿದ್ದಾರೆ.

Karnataka : ಇತ್ತೀಚೆಗೆ ಕರ್ನಾಟಕದಾದ್ಯಂತ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ.
ಬೆಂಗಳೂರು, ದಾವಣಗೆರೆ, ಹಾವೇರಿ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ವರ್ಷದ ಆರಂಭದಲ್ಲೇ ಹಲವಾರು ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನಲ್ಲಿ ಇನ್ಸ್ಪೆಕ್ಟರ್ ಬಂಧನ
ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೋವಿಂದರಾಜು ಅವರು ಜನವರಿಯಲ್ಲಿ 4 ಲಕ್ಷ ರೂ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಹೈಡ್ರಾಮಾನೇ ಮಾಡಿದ್ದರು. ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದರು.

ತುಮಕೂರಿನಲ್ಲಿ ಲಂಚ ಪಡೆದು ಸಿಕ್ಕಿಬಿದ್ದಿದ್ದ ಸಬ್ ಇನ್ಸ್ಪೆಕ್ಟರ್
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಅವರು ಸಹ ಲೋಕಾಬಲೆಗೆ ಸಿಕ್ಕಿಬಿದ್ದಿದ್ದರು. ನಗರದ ಕೆಸರಮಡು ಬಳಿ ದರ್ಗಾದ ಮುಂದೆ ನಿಂತಿದ್ದ ಬೆಂಗಳೂರು ಮೂಲದ ವಕೀಲ ಶ್ರೀಧರ್ ಎಂಬುವರಿಗೆ ಸೇರಿದ್ದ ಕಾರನ್ನು ಚೇತನ್ ವಶಕ್ಕೆ ಪಡೆದಿದ್ದರು.

ಕಾರನ್ನು ಬಿಡಲು 5 ಲಕ್ಷಕ್ಕೆ ಬೇಡಿಕೆ ಇಟ್ಟು ಕೊನೆಗೆ1 ಲಕ್ಷ ಹಣ ಪಡೆದು ಕಾರು ಬಿಡಲು ತೀರ್ಮಾನ ಆಗಿ ಪಿಎಸ್ಐ ಚೇತನ್ ಕುಮಾರ್ 40 ಸಾವಿರ ಹಣವನ್ನು ಅಡ್ವಾನ್ಸ್ ಆಗಿ ಹಣ ಪಡೆದಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಲೋಕಾಯುಕ್ತ ಪೊಲೀಸ್ ಮಂಜೇಗೌಡ ನೇತೃತ್ವದ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದರು.
ಶಾಸಕ ಡಾ. ಚಂದ್ರು ಲಮಾಣಿ ಬಂಧನ
ಇನ್ನು ಈ ಘಟನೆಗಳು ಮಾಸುವ ಮುನ್ನವೇ ಗುತ್ತಿಗೆದಾರನಿಂದ ಕಮಿಷನ್ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ವೇಳೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದು, ಜೈಲು ಪಾಲಾಗಿದ್ದಾರೆ.

ಗದಗ ಹಾಗೂ ಹಾವೇರಿಯಲ್ಲಿ ಸರಣಿ ದಾಳಿ
ಇನ್ನು ಶಾಸಕರ ಬಂಧನದ ಬೆನ್ನಲ್ಲೇ ಗದಗ ಶಹರ ಪೊಲೀಸ್ ಠಾಣೆಯ ASI ಹಾಗೂ ಖಾತೆ ಬದಲಾವಣೆಗಾಗಿ ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾ ಬಲೆಗೆ ಬಿದ್ದಿದ್ದರು.
ಶಹರ ಠಾಣೆಗೆ ಅನಾಮಧೇಯ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಲು ASI ಸಿ.ವಿ ಇಂಗಳಳ್ಳಿ ಅವರು 13 ಸಾವಿರ ಹಣ ಬೇಡಿಕೆ ಇಟ್ಟಿದ್ದಾರೆ ಎಂದು ವಿರೇಶ ಪೂಜಾರ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡ ದಾಳಿ ಮಾಡಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಲೋಕಾ ದಾಳಿ. ಶಾಸಕರ ಬಳಿಕ ASI, ಗ್ರಾಮ ಲೆಕ್ಕಾಧಿಕಾರಿ ಬಂಧನ.!

ಮತ್ತೊಂದು ಪ್ರಕರಣದಲ್ಲಿ ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ಲೆಕ್ಕಾಧಿಕಾರಿ ಫಕ್ಕಿರೇಶ್ ಬಾರ್ಕಿ ಬಸಾಪುರ ಗ್ರಾಮದ ರೈತ ಕರಿಯಲ್ಲಪ್ಪ ಕೆಸರಳ್ಳಿ ಅವರ ಖಾತೆ ಬದಲಾವಣೆ ಮಾಡಲು ಫಕ್ಕಿರೇಶ್ ಒಟ್ಟು 63,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.
ಈ ಹಿಂದೆ 30,000 ರೂಪಾಯಿ ಪಡೆದಿದ್ದರೂ ಕೆಲಸ ಪೂರ್ಣಗೊಳಿಸಿರಲಿಲ್ಲ ಎನ್ನಲಾಗಿದೆ. ಇಂದು ಮತ್ತೊಮ್ಮೆ 8,500 ರೂಪಾಯಿ ಪಡೆಯಲು ಮುಂದಾಗಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು.
ಭ್ರಷ್ಟಾಚಾರಕ್ಕೆ ಬ್ರೇಕ್: ರಾಜ್ಯಾದ್ಯಂತ ನಿರಂತರ ದಾಳಿ
ಕಳೆದ ವಾರ ಹಾವೇರಿ ತಾಲೂಕಿನ ಗುತ್ತಲ ಹೆಸ್ಕಾಂ ಕಚೇರಿಯ ಸಹಾಯಕ ಇಂಜಿನಿಯರ್ ಬಿ. ಮಿಥುನ್ ಗೌಡ ಲೇಔಟ್ ಕಾಮಗಾರಿಗೆ ಇನ್ವೆಂಟರಿ ರಿಪೋರ್ಟ್ ನೀಡಲು 40 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ತಗ್ಲಾಕೊಂಡಿದ್ದಾರೆ.
ಇನ್ನು ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಒಬ್ಬೊಬ್ಬರೇ ಲೋಕಾ ಬಲೆಗೆ ಬೀಳ್ತಾ ಇದ್ದು, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಾ ಇದ್ಯಾ ಎಂಬ ಅನುಮಾನ ಮೂಡಿದೆ.
ಒಟ್ಟಿನಲ್ಲಿ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಭ್ರಷ್ಟರಿಗೆ ನಡುಕ ಹುಟ್ಟಿಸುವ ಕೆಲಸ ಮಾಡ್ತಾ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಇದೆ.
MUST WATCH : IDSMT ಯ ಸಾಲು ಸಾಲು ಕರ್ಮಕಾಂಡ- ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು




