
BENGALURU : ಹಿರಿಯ ಕನ್ನಡ ಕಾದಂಬರಿಕಾರ ಡಾ. ಎಸ್ಎಲ್ ಭೈರಪ್ಪ (94) ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ದರ್ಶನವನ್ನು ಪಡೆದರು. ಅವರ ಜೊತೆ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಂಸದ ತೇಜಸ್ವಿ ಸೂರ್ಯ, ಮತ್ತಿತರ ಗಣ್ಯರು ಇದ್ದರು.
ನಿನ್ನೆ ಬೆಂಗಳೂರಿನ ರಾಜಾಜಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದ ಭೈರಪ್ಪನವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅನಾವರಣ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ಅವರ ಕೊನೆಯ ನಮನ ಸಲ್ಲಿಸಬಹುದು. ನಂತರ ಪಾರ್ಥಿವ ಶರೀರವನ್ನು ಭೈರಪ್ಪನವರ ಕಾರ್ಯಕ್ಷೇತ್ರ ಮೈಸೂರಿಗೆ ಸಾಗಿಸಲಾಗುತ್ತದೆ.
ಇಂದು ಮತ್ತು ನಾಳೆ ಮೈಸೂರಿನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಇರಲಿದ್ದು, ನಾಳೆ ಮೈಸೂರು ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಇನ್ನು ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳನ್ನು ಪಡೆದ ಭೈರಪ್ಪ ಅವರ ಸಾಹಿತ್ಯಕ ಸಾಧನೆಗೆ ಕನ್ನಡದ ಸಾಹಿತ್ಯ ಲೋಕದ ಜೊತೆಗೆ ಅನೇಕ ಭಾಷಾ ಮಾಧ್ಯಮಗಳು ಗೌರವ ಸೂಚಿಸುತ್ತಿವೆ. ಅವರ ನಿಧನಕ್ಕೆ ಗಣ್ಯರು ಮತ್ತು ಅಭಿಮಾನಿಗಳು ಸಂತಾಪದ ಸೂಚಿಸಿದ್ದಾರೆ.




