Udupi ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಧಾರವಾಡದಿಂದ ಕುಂದಾಪುರ ಕಡೆ ತೆರಳುತ್ತಿದ್ದ ಲಾರಿಗೆ ಟೈರ್ ಸ್ಫೋಟದಿಂದ ಬೆಂಕಿ..!!!

Udupi : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ಚಾಲಕ ಹೊರಬಂದ ಕಾರಣ ಭಾರೀ ಅನಾಹುತ ತಪ್ಪಿದೆ.
ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಬಿಜೂರು ಭಾಗದ ರಾಷ್ಟ್ರೀಯ ಹೆದ್ದಾರಿ 66 ಸೇತುವೆ ಬಳಿ ನಡೆದಿದೆ. ಧಾರವಾಡದಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಲಾರಿಗೆ ಮಧ್ಯೆ ದಾರಿ ಬೆಂಕಿ ತಗುಲಿದ್ದು ಆತಂಕ ಸೃಷ್ಟಿಸಿತು.
ಟೈರ್ ಸ್ಫೋಟದಿಂದ ಬೆಂಕಿ ಅವಘಡ
ಮಾಹಿತಿಯ ಪ್ರಕಾರ, ಪಶು ಆಹಾರ ಸಾಗಿಸುತ್ತಿದ್ದ ಲಾರಿಯ ಹಿಂಬದಿಯ ಟೈರ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಬಳಿಕ ಕ್ಷಣಾರ್ಧದಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿಯ ಹಿಂಭಾಗವನ್ನು ಆವರಿಸಿತು. ಲಾರಿಯಲ್ಲಿದ್ದ ಪಶು ಆಹಾರ ಸಂಪೂರ್ಣವಾಗಿ ಬೆಂಕಿಗಾಹುತಿಯಾಯಿತು.
ಇದನ್ನು ಓದಿ : `Toxic’ ನ ರಣರೋಚಕ ಟೀಸರ್ ರಿಲೀಸ್ – ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್
ಚಾಲಕ ಅಪಾಯದಿಂದ ಪಾರು
ಲಾರಿ ಚಾಲಕ ಚಂದ್ರಕಾಂತ್ ಸಮಯಕ್ಕೆ ಸರಿಯಾಗಿ ವಾಹನದಿಂದ ಹೊರಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಜ್ವಾಲೆಗಳು ಹೆಚ್ಚಾಗುತ್ತಿದ್ದಂತೆ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡ್ಡಿಯಾಯಿತು.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸಾರ್ವಜನಿಕರ ಸಹಕಾರದಿಂದ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದ್ದು, ಹೆಚ್ಚಿನ ಹಾನಿ ತಪ್ಪಿಸಲಾಗಿದೆ.
ತನಿಖೆ ಮುಂದುವರಿಕೆ
ಪ್ರಾಥಮಿಕವಾಗಿ ಟೈರ್ ಸ್ಫೋಟವೇ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.
ಇದನ್ನು ನೋಡಿ : ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಪರದಾಟ- ಸೇವೆ ಸಿಗದೇ ಕಂಗಾಲಾದ್ರು




