KMF ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ವೈರಲ್ ಸುದ್ದಿಗೆ ಬಿ. ಶಿವಸ್ವಾಮಿ ಸ್ಪಷ್ಟನೆ ನೀಡಿದ್ದಾರೆ…

KMF : ಕನ್ನಡಿಗರ ಹೆಮ್ಮೆಯ ಹಾಲು ಉತ್ಪನ್ನ ಬ್ರ್ಯಾಂಡ್ ಆಗಿರುವ ನಂದಿನಿ ಉತ್ಪನ್ನಗಳು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು.
ಆದರೆ ಇದೀಗ ಈ ಕುರಿತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದು, ಈ ಆರೋಪಗಳು ಸಂಪೂರ್ಣ ಆಧಾರರಹಿತ ಹಾಗೂ ಸುಳ್ಳು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸುಳ್ಳು ಸುದ್ದಿ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಹಾಗೂ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂಬ ಸಂದೇಶಗಳು ವೈರಲ್ ಆಗಿದ್ದವು.
ಈ ಹೇಳಿಕೆಯನ್ನು ವೈದ್ಯೆ ಎಂದು ಪರಿಚಯಿಸಲಾದ ಡಾ. ಶರಣ್ಯ ಸಂತೋಷ್ ಅವರ ಹೆಸರಿನಲ್ಲಿ ಹಂಚಲಾಗುತ್ತಿದ್ದು, ಇದರಿಂದ ಗ್ರಾಹಕರಲ್ಲಿ ಗೊಂದಲ ಮತ್ತು ಭೀತಿ ಉಂಟಾಗಿತ್ತು.

ಆದರೆ ಕೆಎಂಎಫ್ ಅಧಿಕಾರಿಗಳು ಈ ಮಾಹಿತಿ ಸಂಪೂರ್ಣ ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಉದ್ದೇಶದಿಂದ ಅಪಪ್ರಚಾರ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
“ಕೆಎಂಎಫ್ ಉತ್ಪನ್ನಗಳು ನೈಸರ್ಗಿಕ – ಯಾವುದೇ ರಾಸಾಯನಿಕ ಬಳಕೆ ಇಲ್ಲ”
ಈ ಬಗ್ಗೆ ಮಾತನಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು, “ಕೆಎಂಎಫ್ ಉತ್ಪನ್ನಗಳನ್ನು ಸಂಪೂರ್ಣ ನೈಸರ್ಗಿಕ ವಿಧಾನದಲ್ಲಿ ತಯಾರಿಸಲಾಗುತ್ತದೆ.
ಯಾವುದೇ ಹಾನಿಕಾರಕ ಕೆಮಿಕಲ್ ಬಳಸುವುದಿಲ್ಲ. ಇದುವರೆಗೆ ಉತ್ಪನ್ನಗಳ ಬಗ್ಗೆ ಯಾವುದೇ ಆರೋಗ್ಯ ಸಂಬಂಧಿತ ದೂರುಗಳು ಬಂದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಅದರ ಜೊತೆಗೆ ಸುಳ್ಳು ಮಾಹಿತಿ ಹರಡಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಮುಂದೆಯೂ ಇದೇ ರೀತಿಯ ಅಪಪ್ರಚಾರ ಮುಂದುವರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಆರೋಗ್ಯ ಇಲಾಖೆಯ ಪರೀಕ್ಷೆಯಲ್ಲಿ ಎಲ್ಲಾ ಉತ್ಪನ್ನಗಳು ಸುರಕ್ಷಿತ
ಅಪಪ್ರಚಾರ ಹೆಚ್ಚಾದ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೆಎಂಎಫ್ ಉತ್ಪನ್ನಗಳನ್ನು ಪರೀಕ್ಷೆ ನಡೆಸಿತ್ತು. ಪರೀಕ್ಷೆಯ ನಂತರ ಹೊರಬಂದ ವರದಿ ಪ್ರಕಾರ ಎಲ್ಲಾ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ದೃಢಪಟ್ಟಿದೆ.

ಮೈಸೂರು ಪಾಕ್, ಮಿಲ್ಕ್ ಪೇಡಾ, ಪನ್ನೀರ್, ವೆನಿಲಾ ಮಿಲ್ಕ್ ಶೇಕ್ ಸೇರಿದಂತೆ ವಿವಿಧ ಉತ್ಪನ್ನಗಳು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಎಂದು ಇಲಾಖೆ ತಿಳಿಸಿದೆ.

ಗ್ರಾಹಕರಿಗೆ ಕೆಎಂಎಫ್ ಮನವಿ
ಸುಳ್ಳು ಸುದ್ದಿಗಳಿಗೆ ಕಿವಿಗೊಡದೇ ಯಾವುದೇ ಭಯವಿಲ್ಲದೆ ನಂದಿನಿ ಉತ್ಪನ್ನಗಳನ್ನು ಬಳಸುವಂತೆ ಕೆಎಂಎಫ್ ಗ್ರಾಹಕರಿಗೆ ಮನವಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪರಿಶೀಲಿಸದ ಮಾಹಿತಿಯನ್ನು ನಂಬಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.




