Karwar : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಲಾರಿ ಹಾಗೂ ಎರಡು ಖಾಸಗಿ ಬಸ್ ನಡುವೆ ಸರಣಿ ಅಪಘಾತ

Karwar : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 24 ಮಂದಿ ಗಾಯಗೊಂಡಿದ್ದಾರೆ. ಸುಂಕಸಾಳ ಸಮೀಪ ನಡೆದ ಈ ಘಟನೆ ಕೆಲಕಾಲ ಹೆದ್ದಾರಿ ಸಂಚಾರವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತು.
ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಸಾಗುತ್ತಿದ್ದ ಲಾರಿ, ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಎರಡು ಖಾಸಗಿ ಬಸ್ಸುಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತಕ್ಕೆ ಕಾರಣವಾಯಿತು. ಮೊದಲಿಗೆ ಲಾರಿ ಮತ್ತು ಸಿಬರ್ಡ್ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಬಳಿಕ ಹಿಂಬದಿಯಿಂದ ಬರುತ್ತಿದ್ದ ಗಣೇಶ್ ಟ್ರಾವೆಲ್ಸ್ ಬಸ್ ಸಿಬರ್ಡ್ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಮತ್ತಷ್ಟು ಗಂಭೀರಗೊಂಡಿತು.
ಇದನ್ನು ಓದಿ : ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾರಿಗೆ ನೌಕರನ ಹತ್ಯೆ..!

ಲಾರಿ ಪಲ್ಟಿ – ಚಾಲಕನಿಗೆ ಗಂಭೀರ ಗಾಯ
ಡಿಕ್ಕಿಯ ತೀವ್ರತೆಗೆ ಲಾರಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಲಾರಿ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ. ಅಪಘಾತದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಭಯಭೀತರಾಗಿದ್ದರು.
ಹಂಪಿಯಿಂದ ಗೋವಾಕ್ಕೆ ತೆರಳುತ್ತಿದ್ದ 12 ವಿದೇಶಿ ಪ್ರವಾಸಿಗರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಅಂಕೋಲ ಹಾಗೂ ಕಾರವಾರದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : ರಸ್ತೆ ದಾಟುವಾಗ ಯುವತಿಗೆ ಬೈಕ್ ಡಿಕ್ಕಿ ಅಪಘಾ*ದಲ್ಲಿ ಗಾಯಗೊಂಡು ಯುವತಿ ಸಾ*




