Hassan ಹೊರವಲಯದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

Hassan : ಫ್ಯಾಕ್ಟರಿ ಕೆಲಸಕ್ಕೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಹನುಮಂತಪುರ ಸಮೀಪದ ಕಾರ್ಖಾನೆಯಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಮೃತನನ್ನು ಪುನೀತ್ (27) ಎಂದು ಗುರುತಿಸಲಾಗಿದೆ. ಅವರು ಕಳೆದ ಆರು ತಿಂಗಳಿನಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಎಂದಿನಂತೆ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದ ಅವರು ಬಳಿಕ ಶಂಕಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರನ್ನು ಬೆಚ್ಚಿಬೀಳಿಸಿದೆ.
ಕಾರ್ಖಾನೆಯ ನೀರಿನ ಸಂಪ್ನಲ್ಲಿ ಮೃತದೇಹ ಪತ್ತೆ
ಬುಧವಾರ ಮಧ್ಯಾಹ್ನ ಕಾರ್ಖಾನೆಯೊಳಗಿನ ನೀರಿನ ಸಂಪ್ನಲ್ಲಿ ನಿಂತ ಸ್ಥಿತಿಯಲ್ಲಿ ಪುನೀತ್ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲಾಗಿಲ್ಲ ಎಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಾರ್ಖಾನೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ತೆರಳಿದ್ದ ಪುನೀತ್ ಮೃತಪಟ್ಟ ಬಳಿಕ ಅವರ ಉಡುಪು ಬದಲಾಯಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇದರಿಂದಾಗಿ ಇದು ಸಹಜ ಸಾವು ಅಲ್ಲ, ಕೊಲೆ ಪ್ರಕರಣವಾಗಿರಬಹುದು ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.
ಇದನ್ನು ಓದಿ : ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾರಿಗೆ ನೌಕರನ ಹತ್ಯೆ..!
ಕಾರ್ಖಾನೆಯಲ್ಲಿ ಪದೇ ಪದೇ ಸಾವುಗಳ ಆರೋಪ
ಕಾರ್ಖಾನೆಯಲ್ಲಿ ಶೇ.80ಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಇಲ್ಲಿ ಪದೇ ಪದೇ ಸಾವಿನ ಘಟನೆಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. ಪುನೀತ್ ಸ್ಥಳೀಯರಾಗಿರುವುದರಿಂದ ಪ್ರಕರಣವನ್ನು ಮುಚ್ಚಿಹಾಕಲು ಸಾಧ್ಯವಾಗದೆ ಇದೀಗ ನಾಟಕವಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪೋಷಕರ ಆಕ್ರಂದನ ಮುಗಿಲುಮುಟ್ಟಿತು
ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ದುಃಖ ವರ್ಣನಾತೀತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ನೂರಾರು ಮಂದಿ ಜಮಾಯಿಸಿದ್ದು, ನ್ಯಾಯಕ್ಕಾಗಿ ಆಗ್ರಹ ವ್ಯಕ್ತವಾಗಿದೆ.
ಇದನ್ನು ನೋಡಿ : ರಸ್ತೆ ದಾಟುವಾಗ ಯುವತಿಗೆ ಬೈಕ್ ಡಿಕ್ಕಿ ಅಪಘಾ*ದಲ್ಲಿ ಗಾಯಗೊಂಡು ಯುವತಿ ಸಾ*




