
BANGALORE : 2019 ರಿಂದ 2023ರ ಮಧ್ಯೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗುವ ಹಲವಾರು ಹಗರಣಗಳ ತನಿಖೆಗೆ ನೇಮಿತವಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತನಿಖಾ ಆಯೋಗವನ್ನು ಕಾಂಗ್ರೆಸ್ ಸರ್ಕಾರ ಅವಧಿ ಮುಗಿಯುವ ಮೊದಲೇ ರದ್ದು ಮಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹೌದು..ಕೋವಿಡ್ ಸಾಂಕ್ರಾಮಿಕದ ವೇಳೆ ನಡೆದ ಬಹುಕೋಟಿ ರೂಪಾಯಿ ಹಗರಣ, ಬಿಬಿಎಂಪಿ ವ್ಯಾಪ್ತಿಯ ಭ್ರಷ್ಟಾಚಾರ, ಹಾಗೂ 40% ಕಮಿಷನ್ ಆರೋಪಗಳ ತನಿಖೆಗಾಗಿ ರಚಿಸಲಾದ ಈ ಆಯೋಗ, ಸರ್ಕಾರಕ್ಕೆ 8,900 ಪುಟಗಳ ತನಿಖಾ ವರದಿ ನೀಡಿತ್ತು. ಆದ್ರೆ 761 ಕಾಮಗಾರಿಗಳ ಪರಿಶೀಲನೆಯ ಬಳಿಕ, ಹಲವಾರು ಅಕ್ರಮಗಳು ಬೆಳಕಿಗೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
ಇನ್ನು ಆಯೋಗವು ತನ್ನ ಆಡಳಿತಾತ್ಮಕ ಕೆಲಸಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 30ರವರೆಗೆ ಅವಧಿ ವಿಸ್ತರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಇದನ್ನು ಪರಿಗಣಿಸದೇ ಸೂಚನೆ ಇಲ್ಲದೇ ಎಲ್ಲಾ ಸವಲತ್ತುಗಳನ್ನು ಹಿಂತೆಗೆದುಕೊಂಡಿದೆ. ಅಧಿಕೃತವಾಗಿ ಆಯೋಗದ ಕಾರ್ಯ ಸಮಾಪ್ತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರವು ಸರ್ಕಾರಿ ಭದ್ರತೆ, ಭ್ರಷ್ಟಾಚಾರ ವಿರೋಧಿ ಕ್ರಮಗಳ ದೃಷ್ಟಿಯಿಂದ ಏನೇನು ಪರಿಣಾಮ ಬೀರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ




