
MANDYA : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದಿಂದ ತುಂಬಿರುವ ದಸರಾ ಉತ್ಸವಕ್ಕೆ ಇಂದು ಭವ್ಯ ಚಾಲನೆ ದೊರೆಯಲಿದೆ. ಇತ್ತ ವಿಶ್ವವಿಖ್ಯಾತ ಮೈಸೂರು ದಸರಾ ಕಳೆಗಟ್ಟಿದೆ. ಈ ಬೆನ್ನಲ್ಲೇ ಇಂದಿನಿಂದ ಮಂಡ್ಯದ ಶ್ರೀರಂಗಪಟ್ಟಣ ದಸರಾ (Srirangapatna Dasara) ಉತ್ಸವಕ್ಕೂ ಚಾಲನೆ ಸಿಗಲಿದೆ.
ನಟ-ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇಂದು ಮಧ್ಯಾಹ್ನ 2:30ಕ್ಕೆ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇನ್ನು ಉತ್ಸವದ ಭಾಗವಾಗಿ ಜಂಬೂ ಸವಾರಿ ಮೆರವಣಿಗೆಯೂ ನಡೆಯುತ್ತಿದ್ದು, ಮೈಸೂರು ದಸರಾದಿಂದ ಆಗಮಿಸಿರುವ ಮಹೇಂದ್ರ ಆನೆ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದೆ. ಬನ್ನಿಮಂಟಪದಿಂದ ಆರಂಭವಾಗುವ ಮೆರವಣಿಗೆ ಶ್ರೀರಂಗನಾಥ ದೇವಾಲಯದವರೆಗೆ ಸಾಗಲಿದೆ. ಈ ಜಾತ್ರೆಗೆ ವಿವಿಧ ಕಲಾತಂಡಗಳು ವೀರಗಾಸೆ, ಪೂಜಾ ಕುಣಿತ, ಡೊಳ್ಳು, ಗಾರುಡಿ ಗೊಂಬೆ ಮುಂತಾದ ನೃತ್ಯ, ಸಂಗೀತದ ಮೂಲಕ ವೈಭವ ಹೆಚ್ಚಿಸಲು ಸಜ್ಜಾಗಿವೆ.




