IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು.

ದಕ್ಷ ಹಾಗೂ ಜನಸ್ನೇಹಿ ಆಡಳಿತಕ್ಕೆ ಹೆಸರು ಮಾಡಿದ್ದ ದಿವಂಗತ IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ರಾಜ್ಯ ಸರ್ಕಾರವು ಅನುಕಂಪದ ಆಧಾರದ ಅಡಿಯಲ್ಲಿ ಸಹಾಯಕ ಹುದ್ದೆ ನೀಡಲಾಗಿದೆ.
ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವು
ಕಳೆದ ವರ್ಷ ನವೆಂಬರ್ 25 ರಂದು, ವಿಜಯಪುರದಿಂದ ಕಲಬುರಗಿಗೆ ಹೋಗುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ನಡೆದ ಕಾರು ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದರು. ಈ ದುರ್ಘಟನೆಯಲ್ಲಿ ಅವರ ಸೋದರರಾದ ಶಂಕರ ಬೀಳಗಿ ಮತ್ತು ಈರಣ್ಣ ಶಿರಸಂಗಿ ಕೂಡ ಮೃತಪಟ್ಟಿದ್ದರು.

ಮಹಾಂತೇಶ್ ಪುತ್ರಿಗೆ ಯಾವ ಇಲಾಖೆಯಲ್ಲಿ ಕೆಲಸ?
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ನೇಮಕಾತಿ) ನಿಯಮಗಳು, 1996ರ ನಿಯಮ 6(1) ರ ಅನ್ವಯ, ಅವರ ಪುತ್ರಿ ಚೈತನ್ಯಾ ಎಂ. ಬೀಳಗಿ ಅವರನ್ನು ಸಹಾಯಕ ಹುದ್ದೆಗೆ ನೇಮಕ ಮಾಡಿದೆ.
ನೇಮಕಾತಿ ಆದೇಶ ಪತ್ರ ಹಸ್ತಾಂತರ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೈತನ್ಯಾ ಬೀಳಗಿ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಹಾಗೂ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಇದನ್ನು ಓದಿ : Hassan : ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

ಅನುಕಂಪದಡಿ 92,500 ವೇತನದ ನೌಕರಿ ಕೊಟ್ಟ ಸರ್ಕಾರ
ಚೈತನ್ಯಾ ಬೀಳಗಿ 49,050 ರಿಂದ 92,500 ರೂಪಾಯಿ ವೇತನ ಶ್ರೇಣಿಯಲ್ಲಿ, ಎರಡು ವರ್ಷಗಳ ಪರೀಕ್ಷಾರ್ಥಾವಧಿ ಸಹಿತ ಸೇವೆ ಆರಂಭಿಸುತ್ತಿದ್ದಾರೆ. ಈಗ ಅವರು ತಮ್ಮ ತಂದೆಯ ಹಾದಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ಸರ್ಕಾರವು ದಕ್ಷ ಅಧಿಕಾರಿ ಕುಟುಂಬಕ್ಕೆ ನೈತಿಕ ಬೆಂಬಲ ನೀಡಿದಂತಾಗಿದೆ.

ಇದನ್ನು ನೋಡಿ : TUMAKURU | ಜ.29, 30 ರಂದು ವಿಶಿಷ್ಟ ಲೈಂಗಿಕತೆ ಸಮುದಾಯದ ಸಮಾವೇಶಕ್ಕೆ ಸಿದ್ಧತೆ




