Karwar : JDS ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಪ್ರಕರಣ . ಎರಡು ಗ್ರಾಮಗಳ ನಡುವೆ ವೈಮನಸ್ಸು..!!

Karwar : ಜೆಡಿಎಸ್ ಮುಖಂಡೆಯ ಪುತ್ರನ ಕಿರುಕುಳದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಆರಂಭದಲ್ಲಿ ಎರಡು ಕುಟುಂಬಗಳ ನಡುವೆ ಸೀಮಿತವಾಗಿದ್ದ ವಿವಾದ ಇದೀಗ ಎರಡು ಗ್ರಾಮಗಳ ನಡುವಿನ ಗಂಭೀರ ವೈಮನಸ್ಸಿಗೆ ಕಾರಣವಾಗಿದೆ.
ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜ್ ಆತ್ಮಹತ್ಯೆ ಪ್ರಕರಣ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದುವರೆಗೆ ಕುಟುಂಬ ಮಟ್ಟದಲ್ಲಿ ನಡೆಯುತ್ತಿದ್ದ ತಿಕ್ಕಾಟ, ಇದೀಗ ಗ್ರಾಮಸ್ಥರ ಮಟ್ಟಕ್ಕೆ ವಿಸ್ತರಿಸಿದ್ದು, ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿವೆ.
ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಕೋಠಾರಕರ ಕಿರುಕುಳದಿಂದಲೇ ರಿಶೇಲ್ ಡಿಸೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕದ್ರಾ ಗ್ರಾಮಸ್ಥರು ಹಾಗೂ ಕ್ರಿಶ್ಚಿಯನ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಇದಲ್ಲದೆ, ಆತ್ಮಹತ್ಯೆಗೂ ಮುನ್ನ ಅತ್ಯಾಚಾರ ನಡೆದಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ ಚಿರಾಗ್ನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಲಾಗಿದೆ . ಅವರ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಿನ್ನರ ಗ್ರಾಮಸ್ಥರಿಂದ ತಿರುಗೇಟು
ಇದಕ್ಕೆ ಪ್ರತಿಯಾಗಿ ಕಿನ್ನರ ಗ್ರಾಮದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಚಿರಾಗ್ ಮತ್ತು ರಿಶೇಲ್ ನಡುವೆ ಪವಿತ್ರ ಪ್ರೀತಿ ಸಂಬಂಧವಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅವರ ಹೇಳಿಕೆಯ ಪ್ರಕಾರ,ರಿಶೇಲ್ ಆಗಾಗ ಚಿರಾಗ್ ಮನೆಗೆ ಬಂದು ಹೋಗುತ್ತಿದ್ದಳು ಇದಕ್ಕೆ ಸಂಬಂಧಿಸಿದಂತೆ ಫೋಟೋ ಹಾಗೂ ವಿಡಿಯೋ ಸಾಕ್ಷಿ ಇದೆ ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪ ಮಾಡಲಾಗುತ್ತಿದೆ
ಕಿನ್ನರ ಗ್ರಾಮದ ಸಿಮಾ ಕೋಠಾರಕರ ಮಾತನಾಡಿ,“ಮಾನಸಿಕ ಒತ್ತಡದಲ್ಲಿರುವ ಚಿರಾಗ್ಗೆ ಏನಾದರೂ ಅನಾಹುತವಾದರೆ, ಸುಳ್ಳು ಆರೋಪ ಮಾಡುತ್ತಿರುವವರೇ ನೇರ ಹೊಣೆಗಾರರು” ಎಂದು ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ, ಸುಳ್ಳು ಆರೋಪಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದಿದ್ದಾರೆ.
ಒಂದು ಪ್ರೀತಿ ವಿವಾದದಿಂದ ಎರಡು ಗ್ರಾಮಗಳ ನಡುವಿನ ಸಂಘರ್ಷ
ಒಟ್ಟಾರೆಯಾಗಿ, ಇಬ್ಬರ ನಡುವಿನ ಪ್ರೀತಿಯಲ್ಲಿನ ಸಣ್ಣ ವೈಮನಸ್ಸು ಒಂದು ಅಮೂಲ್ಯ ಜೀವ ಕಸಿದುಕೊಂಡಿದೆ. ಇದೀಗ ಎರಡು ಗ್ರಾಮಗಳ ಜನರ ನಡುವೆ ದ್ವೇಷ ಮತ್ತು ಉದ್ವಿಗ್ನತೆಗೆ ಕಾರಣವಾಗಿದೆ . ಈ ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.




