Hassan ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯಾದ್ಯಂತ ಆತಂಕ ಮೂಡಿಸಿದೆ.

Hassan : ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಶವವನ್ನು ಸ್ಥಳದಲ್ಲೇ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಕಾಡಾನೆ ದಾಳಿಗೆ ಬಲಿಯಾದ ಮಹಿಳೆ
ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಈ ದುರ್ಘಟನೆ ನಡೆದಿದೆ.ಮೃತ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದ್ದು, ಅವರು ಕೂಲಿ ಕಾರ್ಮಿಕರಾಗಿದ್ದರು.
ಮಂಜಾನೆ ಕಾಫಿ ತೋಟದಲ್ಲಿ ಸುಣ್ಣ ಹಚ್ಚುವ ಕೆಲಸಕ್ಕೆ ತಾಯಿ ರಾಜಮ್ಮ ಮತ್ತು ಪುತ್ರಿಯರಾದ ಶೋಭಾ, ರಾಗಿಣಿ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಮೂವರು ತಪ್ಪಿಸಿಕೊಳ್ಳಲು ಓಡಿದರೂ, ಶೋಭಾ ಅವರನ್ನು ಬೆನ್ನಟ್ಟಿದ ಸಲಗ ತುಳಿದು ಸ್ಥಳದಲ್ಲೇ ಕೊಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಅಲ್ಲಿಯೇ ಇಟ್ಟು ಶವ ಮೇಲೆತ್ತಲು ನಿರಾಕರಿಸಿ ಧರಣಿ ನಡೆಸಿದರು. ಅರಣ್ಯ ಇಲಾಖೆ ಕಾಡಾನೆ ಸಂಚಾರದ ಮುಂಚಿತ ಮಾಹಿತಿ ನೀಡದೆ, ಪುಂಡಾನೆಗಳನ್ನು ಸೆರೆಹಿಡಿಯದೇ ಹಾಗೂ ರೇಡಿಯೋ ಕಾಲರ್ ಅಳವಡಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಹಾಗೂ ಡಿಎಫ್ಒ ಸೌರಭ್ ಕುಮಾರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದರೂ ಗ್ರಾಮಸ್ಥರ ಆಕ್ರೋಶ ತಣ್ಣಗಾಗಲಿಲ್ಲ.
“ಪರಿಹಾರದ ಹಣ ಮಾತ್ರ ಬೇಡ, ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಬೇಕು” ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ,
- ಮೃತ ಮಹಿಳೆಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ
- ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ
ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು. ಡಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಕಳೆದ ಕೆಲವು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಮಾಯಕರು ಬಲಿಯಾಗುತ್ತಿರುವುದು ಜನರಲ್ಲಿ ಭಯ ಹಾಗೂ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.




