Dental ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ..!

Dental ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮೃತ ವಿದ್ಯಾರ್ಥಿನಿ ಬರೆದಿಟ್ಟಿದ್ದ ಡೆತ್ನೋಟ್ ಇದೀಗ ಪತ್ತೆಯಾಗಿದೆ. ಡೆತ್ನೋಟ್ನಲ್ಲಿ “ನನ್ನ ಸಾವಿಗೆ ಯಾರು ಕಾರಣರಲ್ಲ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಪ್ರಕರಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಆರಂಭದಲ್ಲಿ ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ವಿರುದ್ಧ ಆರೋಪಗಳು ಕೇಳಿಬಂದಿದ್ದವು.

ಡೆತ್ನೋಟ್ನಲ್ಲಿ ಏನಿದೆ?
ಮೃತ ಯಶಸ್ವಿನಿ ಬರೆದಿಟ್ಟಿರುವ ಡೆತ್ನೋಟ್ನಲ್ಲಿ,
“ನಾನು ಬದುಕಕ್ಕೆ ಯೋಗ್ಯಳಲ್ಲ. ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರು ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ Thank You So Much”
ಎಂದು ಬರೆದಿರುವುದು ತಿಳಿದುಬಂದಿದೆ.
ಇನ್ನೊಂದೆಡೆ, ಕಾಲೇಜಿನಲ್ಲಿ ಯಶಸ್ವಿನಿ ಅಳುತ್ತಾ ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾಲೇಜು ಸಿಬ್ಬಂದಿ ಹಾಗೂ ಸೀನಿಯರ್ಗಳಿಂದ ಯಶಸ್ವಿನಿಗೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪಗಳು ಸಹ ಕೇಳಿಬಂದಿವೆ. “ಸ್ಲಂನಿಂದ ಬಂದವಳಂತೆ ಕಾಣ್ತೀಯ” ಎಂದು ಅವಮಾನಿಸಿದ್ದರು ಎನ್ನುವ ಆರೋಪವೂ ಇದೆ.
ಪೋಷಕರಿಂದ ದೂರು
ಈ ಕುರಿತು ಯಶಸ್ವಿನಿಯ ಪೋಷಕರು ಈಗಾಗಲೇ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಮಾನಸಿಕ ಕಿರುಕುಳವೇ ಈ ದುರ್ಘಟನೆಗೆ ಕಾರಣ ಎನ್ನುವ ಆರೋಪಗಳು ಬಲವಾಗಿದ್ದವು.
ಮೃತ ವಿದ್ಯಾರ್ಥಿನಿ ಜ.7ರಂದು ಕಣ್ಣು ನೋವಿನ ಕಾರಣ ಕಾಲೇಜಿಗೆ ರಜೆ ಪಡೆದಿದ್ದರು. ಮಾರನೇ ದಿನ ಕಾಲೇಜಿಗೆ ಹೋದಾಗ,
- ಯಾವ ಕಣ್ಣಿನ ಡ್ರಾಪ್ಸ್ ಬಳಸಿದ್ದೀಯಾ?
- ಎಷ್ಟು ಹನಿ ಹಾಕಿಕೊಂಡೆ?
- ಇಡೀ ಬಾಟಲ್ ಸುರಿದುಕೊಂಡೆಯಾ?
ಎಂದು ಉಪನ್ಯಾಸಕರು ವಿದ್ಯಾರ್ಥಿಗಳ ಮುಂದೆ ಅವಮಾನಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಸೆಮಿನಾರ್ಗೆ ಅವಕಾಶ ನೀಡದೇ, ರೆಡಿಯಾಲಜಿ ಕೇಸ್ ನೀಡದೆ ಕಿರುಕುಳ ನೀಡಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಮೃತ ವಿದ್ಯಾರ್ಥಿನಿಯನ್ನು ಪರಿಮಳ–ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ (23) ಎಂದು ಗುರುತಿಸಲಾಗಿದೆ.
ಬೊಮ್ಮನಹಳ್ಳಿ ಖಾಸಗಿ ಕಾಲೇಜಿನ Oral Medicine and Radiology ವಿಭಾಗದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.
“ಕಾಲೇಜಿಗೆ ರಜೆ ಹಾಕಿದ್ದಕ್ಕೆ ನನ್ನ ಮಗಳಿಗೆ ಅವಮಾನ ಮಾಡಿದ್ದಾರೆ. ಕಣ್ಣಿಗೆ ಗಾಯವಾಗಿದ್ದರಿಂದ ಹೇಳಿಯೇ ರಜೆ ತೆಗೆದುಕೊಂಡಿದ್ದಳು. ವಿದ್ಯಾರ್ಥಿಗಳ ಮುಂದೆ ಅವಮಾನಿಸಿದ್ದು ಅವಳ ಮನಸ್ಸಿಗೆ ತುಂಬಾ ನೋವು ತಂದಿತ್ತು. ಉಪನ್ಯಾಸಕರು ಮಾತ್ರವಲ್ಲ, ಆಡಳಿತ ಮಂಡಳಿಯೂ ಕಿರುಕುಳ ನೀಡಿದೆ” ಎಂದು ಮೃತ ವಿದ್ಯಾರ್ಥಿನಿಯ ತಾಯಿ ಆರೋಪಿಸಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆ
ಈ ಘಟನೆಯ ಬಳಿಕ, ಟಾರ್ಚರ್ ನೀಡಿದ ಪ್ರಾಂಶುಪಾಲ ಹಾಗೂ ಅವಮಾನಿಸಿದ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಮೃತ ವಿದ್ಯಾರ್ಥಿನಿಯ ಸಹಪಾಠಿಗಳು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದರು.




