Tirupati Darshan: ವಿಶ್ವಪ್ರಸಿದ್ಧ ತಿರುಪತಿ ಏಳುಕೊಂಡಲ ಶ್ರೀವಾರಿ ದೇವಸ್ಥಾನಕ್ಕೆ ಪ್ರತಿದಿನವೂ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

Tirupati Darshan : ತಿಮ್ಮಪ್ಪನ ದರ್ಶನ ಬುಕಿಂಗ್ನಲ್ಲಿ ಇಂದಿನಿಂದ ಹೊಸ ಬದಲಾವಣೆ
ವಿಶ್ವಪ್ರಸಿದ್ಧ ತಿರುಪತಿ ಏಳುಕೊಂಡಲ ಶ್ರೀವಾರಿ ದೇವಸ್ಥಾನಕ್ಕೆ ಪ್ರತಿದಿನವೂ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುವ ಹಿನ್ನೆಲೆಯಲ್ಲಿ, ಭಕ್ತರ ಸೌಲಭ್ಯಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ದರ್ಶನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದೆ.
ಜನವರಿ 9ರಿಂದ ಶ್ರೀವಾಣಿ ಟ್ರಸ್ಟ್ (Srivani Trust) ವಿಐಪಿ ದರ್ಶನ ಟಿಕೆಟ್ಗಳಿಗೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆನ್ನು ಟಿಟಿಡಿ ಪ್ರಯೋಗಾತ್ಮಕವಾಗಿ ಆರಂಭಿಸಿದೆ. ಇದುವರೆಗೆ ಕೇವಲ ತಿರುಮಲದ ಕೌಂಟರ್ಗಳಲ್ಲಿ ಲಭ್ಯವಿದ್ದ ಟಿಕೆಟ್ಗಳು ಇದೀಗ ಆನ್ಲೈನ್ ಮೂಲಕವೂ ಸಿಗಲಿವೆ.

10,500 ರೂ ದೇಣಿಗೆ ನೀಡುವವರಿಗೆ ವಿಶೇಷ ದರ್ಶನ
ಶ್ರೀವಾಣಿ ಟ್ರಸ್ಟ್ಗೆ ₹10,500 ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ಭಕ್ತರಿಗೆ ಈ ವಿಶೇಷ ವಿಐಪಿ ಬ್ರೇಕ್ ದರ್ಶನ ಟಿಕೆಟ್ಗಳು ಲಭ್ಯವಾಗುತ್ತವೆ. ಈ ಟಿಕೆಟ್ ಮೂಲಕ ಅದೇ ದಿನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಡಿಮೆ ಜನಸಂದಣಿ ಮತ್ತು ತ್ವರಿತ ದರ್ಶನ ಪಡೆಯುವ ಅವಕಾಶ ಸಿಗಲಿದೆ.
ಪ್ರಸ್ತುತ ತಿರುಮಲದಲ್ಲಿ ಕೌಂಟರ್ ಮೂಲಕ ವಿತರಿಸಲಾಗುತ್ತಿದ್ದ 800 ಶ್ರೀವಾಣಿ ಬ್ರೇಕ್ ದರ್ಶನ ಟಿಕೆಟ್ಗಳು ಇನ್ನು ಮುಂದೆ ಆನ್ಲೈನ್ ಬುಕ್ಕಿಂಗ್ ಮೂಲಕ ಲಭ್ಯವಾಗಲಿವೆ.
ಇದಲ್ಲದೆ, ಮೂರು ತಿಂಗಳ ಮುಂಚಿತವಾಗಿ ಬಿಡುಗಡೆ ಮಾಡುವ 500 ಟಿಕೆಟ್ಗಳ ಆನ್ಲೈನ್ ಕೋಟಾಗೆ ಇವು ಹೆಚ್ಚುವರಿಯಾಗಿರುತ್ತವೆ.
ಟಿಕೆಟ್ ಬುಕ್ಕಿಂಗ್ ಸಮಯ ಮತ್ತು ದರ್ಶನ ಮಾಹಿತಿ
- ಆನ್ಲೈನ್ ಬುಕ್ಕಿಂಗ್: ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ
- ಅದೇ ದಿನದ ದರ್ಶನಕ್ಕೆ: ಸಂಜೆ 4 ಗಂಟೆಗೆ ತಿರುಮಲದಲ್ಲಿ ಹಾಜರಿರಬೇಕು
- ಪ್ರಯೋಗಾವಧಿ: ಒಂದು ತಿಂಗಳು
ಈ ಅವಧಿಯ ಬಳಿಕ ಶ್ರೀವಾಣಿ ದರ್ಶನ ಸಮಯ ಮತ್ತು ವ್ಯವಸ್ಥೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟಿಟಿಡಿ ತಿಳಿಸಿದೆ.ದೀರ್ಘಕಾಲ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಭಕ್ತರು ಆನ್ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಟಿಟಿಡಿ ಮನವಿ ಮಾಡಿದೆ

ಮಾರ್ಚ್ 3ರಂದು ಚಂದ್ರಗ್ರಹಣ
ಮಾರ್ಚ್ 3ರಂದು ಚಂದ್ರಗ್ರಹಣ ಇರುವುದರಿಂದ, ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಬೆಳಿಗ್ಗೆ 9 ರಿಂದ ಸಂಜೆ 7.30ರವರೆಗೆ (ಸುಮಾರು 10 ಗಂಟೆಗಳ ಕಾಲ) ಬಂದ್ ಆಗಿರಲಿದೆ ಎಂದು ಟಿಟಿಡಿ ಘೋಷಿಸಿದೆ.
ಗ್ರಹಣ ಸಮಯ ಮತ್ತು ದರ್ಶನ ಪುನರಾರಂಭ
- ಚಂದ್ರಗ್ರಹಣ ಸಮಯ: ಮಧ್ಯಾಹ್ನ 3.20 ರಿಂದ ಸಂಜೆ 6.47ರವರೆಗೆ
- ಸಂಪ್ರದಾಯದಂತೆ 6 ಗಂಟೆ ಮುಂಚಿತವಾಗಿ ದೇವಸ್ಥಾನ ಮುಚ್ಚಲಾಗುತ್ತದೆ
- ಶುದ್ಧೀಕರಣ ವಿಧಿವಿಧಾನಗಳ ಬಳಿಕ: ರಾತ್ರಿ 8.30ರಿಂದ ದರ್ಶನ ಪುನರಾರಂಭ
ಗ್ರಹಣದ ಹಿನ್ನೆಲೆಯಲ್ಲಿ ಮಾರ್ಚ್ 3ರಂದು ನಡೆಯಬೇಕಿದ್ದ ಎಲ್ಲಾ ಇತರ ಸೇವೆಗಳು ರದ್ದುಗೊಳಿಸಲಾಗಿದೆ.ಮಾರ್ಚ್ 3ರ ದರ್ಶನ ಟಿಕೆಟ್ ಮತ್ತು ವಸತಿ ವ್ಯವಸ್ಥೆಯನ್ನು ಭಕ್ತರು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಟಿಟಿಡಿ ಸಲಹೆ ನೀಡಿದೆ.




