
CHAMARAJANAGARA ACCIDENT : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕಾರು ಡಿಕ್ಕಿಯಾಗಿ ಬೈಕ್ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹಂಗಳ ಗ್ರಾಮದ ನಿವಾಸಿ ಡೇರಿ ಉದ್ಯೋಗಿಯಾಗಿರುವ ಮನು (29) ಮೃತ ದುರ್ದೈವಿಯಾಗಿದ್ದಾರೆ. ನೆನ್ನೆ ಬೆಳಿಗ್ಗೆ ಶನೇಶ್ವರ ದೇವಾಲಯದ ಎದುರು ತಮ್ಮ ಬೈಕಿನಲ್ಲಿ ತೆರಳುತ್ತಿದ್ದ ವೇಳೆ, ಬೊಮ್ಮಲಾಪುರ ಗ್ರಾಮ ದಿಂದ ವೇಗವಾಗಿ ಬಂದ ಕಾರೊಂದು ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮನುವಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಕಾರು ಚಾಲಕನಿಗೆ ಧರ್ಮದೇಟು ಕೊಟ್ಟಿದ್ದಾರೆ. ಮಾಹಿತಿ ಪಡೆದ ಪಟ್ಟಣದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.




