
MYSORE: ನಾಡಹಬ್ಬ ಮೈಸೂರು ದಸರಾ 2025ಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಈ ಬಾರಿ ವಿಜ್ಞಾನ-ಸೈನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಲಿದೆ. ಬನ್ನಿಮಂಟಪದ ಮೈದಾನ ಹಾಗೂ ಅರಮನೆ ಆವರಣದಲ್ಲಿ ವಿವಿಧ ಆಕರ್ಷಣೀಯ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ 27ರಂದು ಸಂಜೆ 4 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ವೈಮಾನಿಕ ಪ್ರದರ್ಶನ (Air Show) ಹಾಗೂ ಸೆಪ್ಟೆಂಬರ್ 28 ಮತ್ತು 29ರಂದು ಸಂಜೆ 6 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಡ್ರೋನ್ ಶೋ (Drone Show). ಹೊಸ ತಂತ್ರಜ್ಞಾನ ಆಧಾರಿತ ಬೆಳಕು-ಧ್ವನಿ ಪ್ರದರ್ಶನ ವೀಕ್ಷಕರನ್ನು ಆಕರ್ಷಿಸಲಿದೆ. ಅಕ್ಟೋಬರ್ 1ಸಂಜೆ 4 ಗಂಟೆಗೆ ಬನ್ನಿಮಂಟಪದ ಮೈದಾನದಲ್ಲಿ ವೈಮಾನಿಕ ಪ್ರದರ್ಶನ ಹಾಗೂ ಪಂಜಿನ ಕವಾಯತು ಪೂರ್ವಾಭ್ಯಾಸ ನಡೆಯಲಿದ್ದು, ಅಕ್ಟೋಬರ್ 2 ಮಧ್ಯಾಹ್ನದಿಂದ – ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ಸಂಜೆ 6 ಗಂಟೆಗೆ – ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು (Torchlight Parade) ನಡೆಯಲಿದೆ.
ಇನ್ನು ಟಿಕೆಟ್ ಮತ್ತು ಪಾಸು ಹೊಂದಿರುವ ವೀಕ್ಷಕರಿಗೆ ಮಾತ್ರ ಪ್ರವೇಶ ಒದಗಿಸಲಾಗುತ್ತದೆ. ಅಧಿಕೃತ ಪಾಸುಗಳು/ಟಿಕೆಟ್ಗಳಿಲ್ಲದವರಿಗೆ ಪ್ರವೇಶ ನಿರಾಕರಿಸಲಾಗುವುದು. ಅರಮನೆ ಆವರಣ ಮತ್ತು ಬನ್ನಿಮಂಟಪ ಮೈದಾನದಲ್ಲಿ ಸೀಮಿತ ಆಸನ ವ್ಯವಸ್ಥೆ ಇರುವುದರಿಂದ, ಸಾರ್ವಜನಿಕರಿಗೆ ಸಮಯ ಮೀರಿ ಪ್ರವೇಶ ನೀಡಲಾಗುವುದಿಲ್ಲ. ಅಲ್ದೇ ದಸರಾ ಸಮಯದಲ್ಲಿ ಸ್ವದೇಶಿ ಉತ್ಪನ್ನಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನವರಾತ್ರಿ ವೇಳೆಯಲ್ಲಿ ಜಿಎಸ್ಟಿ ಉಳಿತಾಯ ಉತ್ಸವ ಆಚರಿಸಿ, ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವಂತೆ ಪ್ರಧಾನಿ ಅವರು ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.




