
MYSURU DASARA : ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಸಿದ್ಧವಾಗಿದೆ. ನಾಳೆ ಬೆಳಿಗ್ಗೆ 10:10ರಿಂದ 10:40ರ ವರೆಗೆ ವೃಶ್ಚಿಕ ಲಗ್ನದಲ್ಲಿ, ಚಾಮುಂಡಿ ಬೆಟ್ಟದ ಬೆಳ್ಳಿಯ ರಥದಲ್ಲಿ ಇರಲಿರುವ ದೇವಿ ಚಾಮುಂಡೇಶ್ವರಿಗೆ ಗಣ್ಯರಿಂದ ಪುಷ್ಪಾರ್ಚನೆ ನೆರವೇರಲಿದೆ. ಈ ಮೂಲಕ 11 ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ಲಭಿಸಲಿದೆ.
ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಈ ಬಾರಿ ಬುಕ್ಕರ್ ಪ್ರಶಸ್ತಿ ವಿಜೇತೆ ಹಾಗೂ ಖ್ಯಾತ ಸಾಹಿತಿ ಬಾನು ಮುಷ್ತಾಕ್ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಹಾಗೂ ಶಾಸಕ ಜಿ.ಟಿ. ದೇವೇಗೌಡಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ವೇದಿಕೆ ಸಂಪೂರ್ಣವಾಗಿ ವಾಟರ್ ಪ್ರೂಫ್ ಆಗಿ ನಿರ್ಮಿಸಲಾಗಿದ್ದು, ವೇದಿಕೆಯಲ್ಲಿ ಗಣ್ಯರಿಗೆ ವಿಶೇಷ ಆಸನಗಳ ವ್ಯವಸ್ಥೆ, ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿ ದೆ. ಪ್ರವೇಶಕ್ಕೆ ಪಾಸ್ ವ್ಯವಸ್ಥೆಮತ್ತು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಚಾಮುಂಡಿ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನ ಪ್ರವೇಶ ನಿರ್ಬಂಧಿತವಾಗಿದ್ದು, ಕೆಳಭಾಗದಲ್ಲಿಯೇ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದೆ. ಉದ್ಘಾಟನಾ ಕಾರ್ಯಕ್ರಮ ಮುಗಿಯುವವರೆಗೂ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.




