Hassan ದ ಸೈಟ್ ವಿವಾದ ಪ್ರಕರಣದಲ್ಲಿ ಎಸ್ಪಿ ಭೇಟಿ ಮಾಡಲು ಬಂದ ನಟ ಯಶ್ ತಾಯಿ ಪುಷ್ಪಾ ಅರುಣ್ಕುಮಾರ್, ಎಸ್ಪಿ ಕಚೇರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾದ ಬಳಿಕ ವಾಪಸ್ ತೆರಳಿದರು.

Hassan ದ ವಿದ್ಯಾನಗರದಲ್ಲಿರುವ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಅವರ ಮಾಲೀಕತ್ವದ ಶೆಡ್ ಹಾಗೂ ಕಾಂಪೌಂಡ್ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ.
ಪ್ರಕರಣದ ಕುರಿತು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶುಭನ್ವಿತಾ ಅವರನ್ನು ಭೇಟಿ ಮಾಡಲು ಪುಷ್ಪಾ ಅರುಣ್ಕುಮಾರ್ ಇಂದು ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದ್ದರು.
ಆದರೆ, ಎಸ್ಪಿ ಅಧಿಕೃತ ಕಾರ್ಯ ನಿಮಿತ್ತ ಸಕಲೇಶಪುರಕ್ಕೆ ತೆರಳಿದ್ದರಿಂದ ಭೇಟಿ ಸಾಧ್ಯವಾಗದೆ ಅವರು ನಿರಾಸೆಯಿಂದ ವಾಪಸ್ ತೆರಳಿದರು.
ಮೂರು ದಿನಗಳ ಹಿಂದೆ ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿಯಾಗಿದ್ದ ಪುಷ್ಪಾ, ಘಟನೆಯಲ್ಲಿ ಸುಮಾರು 24 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಆರೋಪಿಸಿದ್ದರು.
ದೇವರಾಜ್ ಹಾಗೂ ಧರ್ಮ ಸೇರಿದಂತೆ ಹಲವರ ವಿರುದ್ಧ ದೂರು ನೀಡಿದ್ದರೂ, ಪೊಲೀಸರು ಎಫ್ಐಆರ್ ದಾಖಲಿಸದೆ ಕೇವಲ ಎನ್ಸಿಆರ್ ದಾಖಲಿಸಿದ್ದಾರೆ ಎಂದು ಹಾಸನ ಬಡಾವಣೆ ಠಾಣೆ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
MUST READ : Ramanagara ದಲ್ಲಿ ರಾರಾಜಿಸುತ್ತಿವೆ ಡಿಕೆಶಿ ಕಟೌಟ್, ಬ್ಯಾನರ್ಗಳು..!!

ಪ್ರಕರಣದಲ್ಲಿ ಇದುವರೆಗೆ ಎಫ್ಐಆರ್ ದಾಖಲಾಗದ ಹಿನ್ನೆಲೆಯಲ್ಲಿ, ಪುಷ್ಪಾ ಅವರ ಸಂಬಂಧಿ ದುರ್ಗಾಪ್ರಸಾದ್ ಡಿಜಿಟಲ್ ಸಾಕ್ಷ್ಯಗಳೊಂದಿಗೆ ಹಾಸನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.
ನ್ಯಾಯಾಲಯದ ನಿರ್ದೇಶನದಂತೆ ಇಂದು ಎಸ್ಪಿ ಕಚೇರಿಗೆ ಆಗಮಿಸಿದ ಪುಷ್ಪಾ ಅರುಣ್ಕುಮಾರ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದರು.
ಆದರೆ ಎಸ್ಪಿ ಗೈರಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಕಚೇರಿಯಿಂದ ವಾಪಸ್ ತೆರಳಿದರು.
ಈ ಬೆಳವಣಿಗೆಯಿಂದ ಹಾಸನ ಸೈಟ್ ವಿವಾದ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.
MUST WATCH : ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ – DKS ಪಟ್ಟಾಭಿಷೇಕಕ್ಕೆ COUNT DOWN.! | BENGALURU NEWS |




