ಕೆಲಸಕ್ಕೆ ರಜೆ ಸಿಗಲಿಲ್ಲವೆಂದು Online ಮೂಲಕ ಎಂಗೇಜ್ಮೆಂಟ್..!

ಇದು ಇಂಟರ್ನೆಟ್ ಯುಗ. ದಿನದ 24 ಗಂಟೆಯಲ್ಲಿಯೂ ಬಹುತೇಕ ಸಮಯವನ್ನು ಜನರು ಆನ್ಲೈನ್ನಲ್ಲೇ ಕಳೆಯುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಕೆಲಸವು Online ಮೂಲಕವೇ ಸುಲಭವಾಗಿ ಆಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಉಡುಪಿಯಲ್ಲಿ ಅಪರೂಪದ ಆನ್ಲೈನ್ ನಿಶ್ಚಿತಾರ್ಥ (Online Engagement) ಕಾರ್ಯಕ್ರಮ ನಡೆದಿದೆ.

ಮಾಗಡಿ ತಾಲೂಕಿನ ಚಕ್ರಬಾವಿ ನಿವಾಸಿ ಸುಹಾಸ್ ಅವರು ಉದ್ಯೋಗ ನಿಮಿತ್ತ ಕೆನಡಾದಲ್ಲಿ ನೆಲೆಸಿದ್ದಾರೆ. ಇವರಿಗೆ ಉಡುಪಿಯ ಮೇಘಾ ಅವರೊಂದಿಗೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಕೆಲಸದ ಒತ್ತಡದಿಂದಾಗಿ ರಜೆ ಸಿಗದ ಕಾರಣ ಸುಹಾಸ್ ಅವರಿಗೆ ಭಾರತಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆನ್ಲೈನ್ ಮೂಲಕವೇ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಇದನ್ನು ಓದಿ : ತುಮಕೂರು DC ಕಚೇರಿಗೆ ಬಾಂಬ್ ಬೆದರಿಕೆ

ಇನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿಡಿಯೋ ಕಾಲ್ ಮೂಲಕ ಮಂತ್ರಾಕ್ಷತೆ, ಆರತಿ ಹಾಗೂ ಇತರ ವಿಧಿವಿಧಾನಗಳು ನೆರವೇರಿದವು. ವರ ಹಾಗೂ ವಧು ಇಬ್ಬರೂ ಕ್ಯಾಮೆರಾ ಮೂಲಕ ಉಂಗುರಗಳನ್ನು ತೋರಿಸಿ ನಿಶ್ಚಿತಾರ್ಥ ಮಾಡಿಕೊಂಡರು. ವಿಡಿಯೋ ಸ್ಕ್ರೀನ್ ಮುಂದೆ ಹಿರಿಯರು ಆರತಿ ಬೆಳಗಿ ಆಶೀರ್ವಾದ ನೀಡಿದರು.

ಈ ವರ್ಚುವಲ್ ನಿಶ್ಚಿತಾರ್ಥಕ್ಕೆ ಎರಡೂ ಕುಟುಂಬದ ಸದಸ್ಯರು ಆನ್ಲೈನ್ ಮೂಲಕ ಸಾಕ್ಷಿಯಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಮುಂದಿನ ತಿಂಗಳು ಜನವರಿ 7 ಮತ್ತು 8 ರಂದು ಉಡುಪಿಯಲ್ಲಿ ಸಂಪ್ರದಾಯಬದ್ಧವಾಗಿ ಮದುವೆ ನಡೆಯಲಿದೆ. ಆನ್ಲೈನ್ ಯುಗದಲ್ಲಿ ಸಂಪ್ರದಾಯ ಮತ್ತು ತಂತ್ರಜ್ಞಾನ ಒಂದಾಗಿರುವ ಈ ನಿಶ್ಚಿತಾರ್ಥ ಎಲ್ಲರ ಗಮನ ಸೆಳೆದಿದೆ.

ಇದನ್ನು ನೋಡಿ : ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದುಗೊಳಿಸಿದ ಹೈಕೋರ್ಟ್ – ಸಿದ್ದುಗೆ ಭಾರೀ ಮುಖಭಂಗ




