ಯಶ್ ನಟನೆಯ Toxic ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಬಹಳ ಮುಂಚೆಯೇ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು. ಆದರೆ ಇದೀಗ Toxic ಬಿಡುಗಡೆ ದಿನಾಂಕದ ಸುತ್ತ ಪೈಪೋಟಿ ದಿನೇದಿನೇ ಹೆಚ್ಚಾಗುತ್ತಿದೆ.
ದುರಂದರ್ 2 ಯಾವಾಗ ರಿಲೀಸ್?
ಈಗಾಗಲೇ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರದ ಎರಡನೇ ಭಾಗವೂ ಮಾರ್ಚ್ 19ರಂದೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಜೊತೆಗೆ ಅಡಿವಿ ಶೇಷ್ ನಟನೆಯ ‘ಡಕೈತ್’ ಸಿನಿಮಾವೂ ಅದೇ ದಿನ ತೆರೆಗೆ ಬರಲಿದೆ. ಇದೀಗ ಮತ್ತೊಂದು ಸ್ಟಾರ್ ನಟನ ಸಿನಿಮಾ ‘ಟಾಕ್ಸಿಕ್’ಗೆ ಪ್ರಬಲ ಸ್ಪರ್ಧೆ ಒಡ್ಡಲು ಸಜ್ಜಾಗಿದೆ.

ಮಾರ್ಚ್ 27ರಂದು ಪೆದ್ದಿ ಸಿನಿಮಾ ಬಿಡುಗಡೆ
ತೆಲುಗು ಮೆಗಾಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಪೆದ್ದಿ ಸಿನಿಮಾ ಮಾರ್ಚ್ 27ರಂದು, ಅಂದರೆ ಟಾಕ್ಸಿಕ್ ಬಿಡುಗಡೆಯಾದ ಒಂದು ವಾರದ ಬಳಿಕ ತೆರೆಗೆ ಬರಲಿದೆ. ಬಿಡುಗಡೆ ದಿನಾಂಕದಲ್ಲಿ ಒಂದು ವಾರದ ಅಂತರವಿದ್ದರೂ ಸಹ, ಪೆದ್ದಿ ಸಿನಿಮಾ ‘ಟಾಕ್ಸಿಕ್’ಗೆ ಬಾಕ್ಸಾಫೀಸ್ನಲ್ಲಿ ಗಟ್ಟಿಯಾದ ಪೈಪೋಟಿ ನೀಡುವ ಸಾಧ್ಯತೆ ಇದೆ.
ಚಿಕಿರಿ-ಚಿಕಿರಿ ಹಾಡು ವೈರಲ್
‘ಪೆದ್ದಿ’ ಸಿನಿಮಾಗೆ ಈಗಾಗಲೇ ಭಾರೀ ಕ್ರೇಜ್ ನಿರ್ಮಾಣವಾಗಿದ್ದು, ಚಿತ್ರದ ‘ಚಿಕಿರಿ-ಚಿಕಿರಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಸಣ್ಣ ಟೀಸರ್ ಸಹ ಭಾರೀ ಹಿಟ್ ಆಗಿ ಟ್ರೆಂಡ್ ಆಗಿತ್ತು. ಇತ್ತೀಚೆಗೆ ಸಿನಿಮಾದ ಶೂಟಿಂಗ್ ನಿಗದಿತ ವೇಗದಲ್ಲಿ ಸಾಗುತ್ತಿಲ್ಲ, ಬಿಡುಗಡೆ ತಡವಾಗಬಹುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುವಂತೆ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಇದನ್ನು ಓದಿ : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ಗಿಲ್ಲ ರಿಲೀಫ್

ಜಾನ್ಹವಿ ಕಪೂರ್ ನಾಯಕಿ
‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲೇ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಉಪ್ಪೆನ’ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಬುಚ್ಚಿಬಾಬು ಸನಾ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಕ್ರಿಕೆಟ್ ಕಥೆಯನ್ನು ಒಳಗೊಂಡಿರುವ ಪೆದ್ದಿ
ಗ್ರಾಮೀಣ ಹಿನ್ನೆಲೆಯ ಕ್ರಿಕೆಟ್ ಕಥೆಯನ್ನು ಒಳಗೊಂಡಿರುವ ‘ಪೆದ್ದಿ’ ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದು, ಸಂಗೀತಕ್ಕೆ ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಸ್ವರ ಸಂಯೋಜನೆ ಮಾಡಿದ್ದಾರೆ.

ಇದನ್ನು ನೋಡಿ : ನಿಮ್ಗೆ ಶಕ್ತಿ ಬಂದಿದೆ ಎಂದು ಕಿಚಾಯಿಸಿದ ಅಶೋಕ್ – R.ASHOK ಗೆ ಮಾತಲ್ಲೆ ಟಾಂಗ್ ಕೊಟ್ಟ CM




