ತಮಿಳುನಾಡು ಮುಖ್ಯಮಂತ್ರಿ ಆದ ಬಳಿಕ ನಟ ವಿಜಯ್ ಅವರನ್ನು ನಟಿ Samantha ಚೆನ್ನೈ ನಿವಾಸದಲ್ಲಿ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಆದ ಬಳಿಕ ನಟ ವಿಜಯ್ ಅವರನ್ನು ಮೊದಲ ಬಾರಿಗೆ ನಟಿ Samantha ಭೇಟಿ ಮಾಡಿದ್ದಾರೆ. ಚೆನ್ನೈನಲ್ಲಿರುವ ವಿಜಯ್ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದ ಸಮಂತಾ, ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಹೊಸ ಸಿನಿಮಾ ‘ಮಾ ಇಂಟಿ ಬಂಗಾರಂ’ ಪ್ರಚಾರದ ಭಾಗವಾಗಿ ಚೆನ್ನೈಗೆ ತೆರಳಿದ್ದ ಸಮಂತಾ, ಮೊದಲಿಗೆ ಸಿಎಂ ವಿಜಯ್ ಅವರನ್ನು ಭೇಟಿ ಮಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡು ಕೆಲಕಾಲ ಮಾತುಕತೆ ನಡೆಸಿದ್ದಾರೆ.
ವಿಜಯ್ ಮತ್ತು ಸಮಂತಾ ಈ ಹಿಂದೆ ಥೇರಿ, ಕತ್ತಿ ಹಾಗೂ ಮರ್ಸಲ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಅವರ ಜೋಡಿಗೆ ಉತ್ತಮ ಅಭಿಮಾನಿ ಬಳಗವಿದೆ. ಸಿನಿಮಾ ಸ್ನೇಹ ಈಗಲೂ ಮುಂದುವರಿದಿರುವುದು ಈ ಭೇಟಿಯಿಂದ ಮತ್ತೊಮ್ಮೆ ಸಾಬೀತಾಗಿದೆ.
MUST READ : Guru Pushya Mahayoga : ಈ 6 ರಾಶಿಗಳಿಗೆ ಅದೃಷ್ಟ, ಧನಲಾಭ ಮತ್ತು ಯಶಸ್ಸಿನ ಸುರಿಮಳೆ..!!

ಭೇಟಿಯ ಬಳಿಕ ಸಮಂತಾ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ವಿಜಯ್ ಕೇವಲ ಸಿನಿಮಾ ನಾಯಕನಾಗಿ ಉಳಿಯುವ ವ್ಯಕ್ತಿಯಲ್ಲ ಎಂದು ತಾವು ಮೊದಲಿನಿಂದಲೂ ನಂಬಿದ್ದಾಗಿ ಹೇಳಿದ್ದಾರೆ. ಅವರ ವ್ಯಕ್ತಿತ್ವ, ನಾಯಕತ್ವ ಮತ್ತು ಜನರ ಮೇಲಿನ ಕಾಳಜಿ ಅವರನ್ನು ದೊಡ್ಡ ಜವಾಬ್ದಾರಿಗಳತ್ತ ಕರೆದೊಯ್ದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಯಶಸ್ವಿ ವೃತ್ತಿಜೀವನವನ್ನು ಬಿಟ್ಟು ಸಮಾಜ ಸೇವೆಯ ದಾರಿಯನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದು ಸಮಂತಾ ಹೇಳಿದ್ದಾರೆ. ವಿಜಯ್ ತಮ್ಮ ಹೊಸ ಜವಾಬ್ದಾರಿಯನ್ನು ಪ್ರಾಮಾಣಿಕತೆ ಮತ್ತು ದೃಢ ಸಂಕಲ್ಪದಿಂದ ನಿರ್ವಹಿಸಿ ಜನರ ವಿಶ್ವಾಸ ಗಳಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ತಮ್ಮ ಸಂದೇಶದ ಕೊನೆಯಲ್ಲಿ, ವಿಜಯ್ ಅವರ ಪಯಣ ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿರುವ ಸಮಂತಾ, ಜೀವನವು ನಮ್ಮ ಕನಸುಗಳಿಗಿಂತಲೂ ದೊಡ್ಡ ಅವಕಾಶಗಳನ್ನು ನೀಡಬಹುದು ಎಂದು ಬರೆದುಕೊಂಡಿದ್ದಾರೆ.
MUST WATCH : ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು – HIGHWAY ತಡೆದು ಅನ್ನದಾತರ ಆಕ್ರೋಶ.! | CHIKKABALLAPURA NEWS |




