Rain Alert : ರಾಜ್ಯದಲ್ಲಿ ತಗ್ಗಿದ ವರುಣಾರ್ಭಟ

ರಾಜ್ಯದ ಹಲವೆಡೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯ ಅಬ್ಬರ ಇದೀಗ ಸ್ವಲ್ಪ ತಗ್ಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿಯೂ ಜುಲೈ 13ರಿಂದ 15ರವರೆಗೆ ಸಾಧಾರಣ ಮಳೆಯಾಗಲಿದೆ.
ಕೆಲವು ಭಾಗಗಳಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚು
ಇದೇ ವೇಳೆ ಜುಲೈ 16 ಮತ್ತು 17ರಂದು ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿರಂತರ ಮಳೆಯಾಗುವ ಪ್ರದೇಶಗಳಲ್ಲಿ ನದಿ ನೀರಿನ ಮಟ್ಟದ ಮೇಲೆ ನಿಗಾ ವಹಿಸುವಂತೆ ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಮಡಿಕೇರಿಯಲ್ಲಿ ಗರಿಷ್ಠ 26 ಡಿಗ್ರಿ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

ಇದನ್ನು ಓದಿ : ಇಂದು ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ
ಜಲಾಶಯಗಳಿಗೆ ಭಾರಿ ಒಳಹರಿವು
ಜುಲೈ ಆರಂಭದಿಂದ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಿಗೆ ಉತ್ತಮ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪದ ತುಂಗಾ ಜಲಾಶಯವು ಈ ವರ್ಷದ ಮೊದಲ ಬಾರಿಗೆ ಸಂಪೂರ್ಣ ಭರ್ತಿಯಾಗಿದೆ.
ನವಿಲುತೀರ್ಥ ಜಲಾಶಯದಲ್ಲಿ ಪ್ರಸ್ತುತ 12.100 ಟಿಎಂಸಿ ನೀರು ಸಂಗ್ರಹವಿದ್ದು, 2,393 ಕ್ಯೂಸೆಕ್ ಒಳಹರಿವು ಮತ್ತು 194 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕೆ.ಆರ್. ಸಾಗರ ಜಲಾಶಯದ ಸ್ಥಿತಿ
- ನೀರಿನ ಮಟ್ಟ: 91.20 ಅಡಿ
- ಒಳಹರಿವು: 12,503 ಕ್ಯೂಸೆಕ್
- ಹೊರಹರಿವು: 807 ಕ್ಯೂಸೆಕ್
- ನೀರಿನ ಸಂಗ್ರಹ: 16.665 ಟಿಎಂಸಿ
ತುಂಗಭದ್ರಾ ಜಲಾಶಯ
- ಒಟ್ಟು ಸಾಮರ್ಥ್ಯ: 105.788 ಟಿಎಂಸಿ
- ಪ್ರಸ್ತುತ ಸಂಗ್ರಹ: 22.948 ಟಿಎಂಸಿ
- ಗರಿಷ್ಠ ನೀರಿನ ಮಟ್ಟ: 1633 ಅಡಿ
- ಪ್ರಸ್ತುತ ನೀರಿನ ಮಟ್ಟ: 1601.08 ಅಡಿ

ಕಬಿನಿ ಜಲಾಶಯ
ಕಬಿನಿ ಜಲಾಶಯಕ್ಕೆ 14,574 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹ ನಿರಂತರವಾಗಿ ಹೆಚ್ಚುತ್ತಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.
ಮಳೆಯ ತೀವ್ರತೆ ತಾತ್ಕಾಲಿಕವಾಗಿ ಕಡಿಮೆಯಾಗಿದ್ದರೂ, ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹವಾಮಾನ ಇಲಾಖೆಯ ಅಧಿಕೃತ ಮಾಹಿತಿ ಹಾಗೂ ಎಚ್ಚರಿಕೆಗಳನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇದನ್ನು ನೋಡಿ : ಜಾನಕಮ್ಮಗೆ ಸರಿಸಾಟಿ ಯಾರು ಇಲ್ಲ – ನಟಿ ಉಮಾಶ್ರೀ ಭಾವುಕ ನುಡಿ


